ಮಡಿಕೇರಿ, ಜೂ. 2: ಬದುಕಿ ನಲ್ಲಿ ಎದುರಾಗಲಿರುವ ಎಲ್ಲ ಪರಿಸ್ಥಿತಿ ಗಳನ್ನು ಸಹಜ ಭಾವದಿಂದ ಸ್ವೀಕರಿ ಸುತ್ತಾ, ದೈನಂದಿನ ಜೀವನಕ್ಕೆ ಹೊಂದಿ ಕೊಂಡಿದ್ದ ಕೊಡಗಿಗೆ ಕಳೆದ ವರ್ಷದ ಮಳೆ ಭವಿಷ್ಯದ ಪ್ರತಿ ಕ್ಷಣದಲ್ಲಿಯೂ ಆತಂಕವನ್ನು ಸೃಷ್ಟಿಸುತ್ತಿದೆ. ಮಳೆ ಬಾರದಿದ್ದರೂ, ಮಳೆ ಸುರಿದರೂ ಅರೆಕ್ಷಣ ಹಳೆಯ ನೆನಪಾಗುತ್ತದೆ.ಕಳೆದ ವರ್ಷ ಮೇ 23 ರಿಂದ ಸುರಿಯಲಾ ರಂಭಿಸಿದ್ದ ಮಳೆರಾಯ, ಜೂನ್ 12 ರಂದು ತಡರಾತ್ರಿ ಕೊಡಗು-ಕೇರಳ ಗಡಿಯಲ್ಲಿ ಅವಾಂತರ ಸೃಷ್ಟಿಸುವದರೊಂದಿಗೆ, ಪೆರುಂಬಾಡಿ - ಮಾಕುಟ್ಟ ನಡುವೆ 50ಕ್ಕೂ ಹೆಚ್ಚು ಕಡೆಗಳಲ್ಲಿ ರಸ್ತೆಯ ಅಲ್ಲಲ್ಲಿ ಭೂಕುಸಿತದೊಂದಿಗೆ ಕರ್ನಾಟಕ -ಕೇರಳ ನಡುವೆ ತಿಂಗಳುಗಟ್ಟಲೆ ಭೂಮಾರ್ಗ ಸಂಪರ್ಕ ಸ್ಥಗಿತಗೊಳ್ಳುವಂತಾಯಿತು.ಮರುಕ್ಷಣ ಮಡಿಕೇರಿ-ಸಂಪಾಜೆ ನಡುವೆ ಅಲ್ಲಲ್ಲಿ ಭೂಕುಸಿತಗೊಂಡು ಹೆದ್ದಾರಿ ಸಂಪರ್ಕ ವಿಲ್ಲದೆ, ಮೈಸೂರು-ಮಂಗಳೂರು ನಡುವೆ ಕರಿಕೆ-ಸುಳ್ಯ ಮುಖಾಂತರ ಸಂಚರಿಸಬೇಕಾಯಿತು. ಅಂತೆಯೇ ಮಡಿಕೇರಿ-ಮೇಕೇರಿ ಹಾದಿಯ ಸಂಪರ್ಕ ಕಡಿತವಾಗಿ ಜಿಲ್ಲಾ ಕೇಂದ್ರದಲ್ಲೇ ದ್ವೀಪದ ಅನುಭವ ಎದುರಿಸುವಂತಾಯಿತು.ಮಡಿಕೇರಿ-ಸೋಮವಾರಪೇಟೆ ಹೆದ್ದಾರಿಯ ಹಾಲೇರಿ-ಕಾಂಡನಕೊಲ್ಲಿ, ಹಟ್ಟಿಹೊಳೆ, ಮಾದಾಪುರ ನಡುವೆ ಅಲ್ಲಲ್ಲಿ ಭೂಕುಸಿತದಿಂದ ರಸ್ತೆ ಸಾರಿಗೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು. ಗಾಳಿ-ಮಳೆಯ ತೀವ್ರತೆ ನಡುವೆ ಲೆಕ್ಕಕ್ಕೂ ಸಿಗದಷ್ಟು ಗಿಡಮರಗಳು ಧರೆಗುರುಳಿ ಸಾವಿರ ಸಂಖ್ಯೆ ವಿದ್ಯುತ್ ಕಂಬಗಳು ತುಂಡಾಗಿ, ಎಲ್ಲೆಂದರಲ್ಲಿ ತಂತಿಗಳು ಹರಿದಾಡಿದವು.

ಜೂನ್-ಜುಲೈ ಎರಡು ತಿಂಗಳ ಮಳೆ ಹಾನಿ ಆಗಸ್ಟ್ ತಿಂಗಳಿನಲ್ಲಿ ನರಕಸದೃಶ್ಯ ಸೃಷ್ಟಿಸಿದಲ್ಲದೆ, ದೇಶದ ಸ್ವಾತಂತ್ರ್ಯ ಸಂಭ್ರಮವನ್ನು ಮರೆಯುವಂತೆ ವಾತಾವರಣ ಸೃಷ್ಟಿಸಿತು. ಆಗಸ್ಟ್ 14 ರಂದು ಮೈದುಂಬಿಕೊಂಡು

(ಮೊದಲ ಪುಟದಿಂದ) ಆತಂಕ ಮೂಡಿಸಿದ್ದ ಹಾರಂಗಿ ಜಲಾಶಯ ದ್ವಾರಗಳು ಒಮ್ಮೆಲೆ ತೆರೆದುಕೊಂಡ ಕಾರಣ, ಇಡೀ ಕುಶಾಲನಗರ ಸುತ್ತಮುತ್ತಲಿನ ಜನವಸತಿ ಪ್ರದೇಶ ಸಮುದ್ರದಂತಾಯಿತು.

ಅಲ್ಲಲ್ಲಿ ಸಾವು: ಪರಿಣಾಮವೆಂಬಂತೆ ಆಗಸ್ಟ್ 15 ರಂದು ಕರವಾಲೆ ಗ್ರಾಮದ ಅಮ್ಮವ್ವ ಬೆಳ್ಯಪ್ಪ (79) ಎಂಬ ವೃದ್ಧೆ ವಿದ್ಯುತ್ ಸ್ಪರ್ಶಗೊಂಡು ಬೆಳ್ಳಂಬೆಳಿಗ್ಗೆ ಮೃತ್ಯುವಿಗೀಡಾದರು. ಮರುದಿನವೇ ಆ. 16 ರಂದು ಕಾಟಕೇರಿ ಗ್ರಾಮದಲ್ಲಿ ಭೂಕುಸಿತದಿಂದ ಮಣ್ಣಿನಡಿ ಸಿಲುಕಿ ಕೃಷಿಕರಾದ ವೆಂಕಟರಮಣ (49), ಪವನ್ ಅಚ್ಚಯ್ಯ (36) ಪ್ರಾಣ ಕಳೆದುಕೊಂಡರು. ಅಂತೆಯೇ ಇವರೊಟ್ಟಿಗೆ ರಜೆಯಲ್ಲಿ ಬಂದಿದ್ದ ಯಶವಂತ್ ಎಂಬ ಕೆಎಸ್‍ಆರ್‍ಪಿ ಪೊಲೀಸ್ ಸಿಬ್ಬಂದಿ ಕೂಡ ಭೂಕುಸಿತದಿಂದ ಮೃತರಾಗಿದ್ದರು.

ಮತ್ತೊಂದೆಡೆ ಆ. 18 ರಂದು ಮುಕ್ಕೋಡ್ಲುವಿನಲ್ಲಿ ಕಾರ್ಮಿಕ ಮುತ್ತ ಎಂಬವರ ಮೂರು ವಾರದ ಹಸುಗೂಸು ಅಸುನೀಗಿದರೆ, ಜೋಡುಪಾಲದಲ್ಲಿ ಒಂದೇ ಕುಟುಂಬದ ಮೂವರು ಹಠಾತ್ ಜಲಸ್ಫೋಟದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿ ಜೀವ ಕಳೆದುಕೊಂಡ ದುರಂತ ಎದುರಾಯಿತು. ಅಲ್ಲಿನ ನಿವಾಸಿಗಳಾದ ಕೆ. ಬಸಪ್ಪ, ಗೌರಮ್ಮ, ಪುತ್ರಿ ಮೋನಿಶಾ ಹಾಗೂ ಸಂಬಂಧಿ ಬೆಟ್ಟತ್ತೂರುವಿನ ಕೆ. ಸೋಮಯ್ಯ ಪುತ್ರಿ ಮಂಜುಳ ಇಹಲೋಕ ತ್ಯಜಿಸಿದ್ದರು. 10ನೇ ತರಗತಿ ಓದುತ್ತಿದ್ದ ಮಂಜುಳ ಶವದ ಯಾವದೇ ಸುಳಿವು ಇಂದಿಗೂ ಲಭಿಸಿಲ್ಲ.

ಆ ದಿನವೇ ಉತ್ತರ ಕೊಡಗಿನ ಹೆಬ್ಬಾಲೆಯಲ್ಲಿ ಗದ್ದೆ ಕೆಲಸ ನಿರತ ಕೃಷಿಕ ಹರೀಶ್‍ಕುಮಾರ್ ಎಂಬವರು ನದಿ ಪ್ರವಾಹಕ್ಕೆ ಸಿಲುಕಿ ದೇಹ ಕೊಚ್ಚಿ ಹೋಯಿತು. ಹೀಗೆ ಮುಂದುವರಿದ ವರುಣನ ರೌದ್ರ ನರ್ತನಕ್ಕೆ ಅದೇ ಆಗಸ್ಟ್ 19 ರಂದು ಕಾಟಕೇರಿ ಗ್ರಾಮದ ಗಿಲ್ಬರ್ಟ್ ಮೆಂಡೋಜ ಭೂಕುಸಿತದಿಂದ ಮೃತಪಟ್ಟರೆ, ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ತೋಟ ಕಾರ್ಮಿಕ ಚಂದ್ರಪ್ಪ ಪೂಜಾರಿ ದುರಂತ ಸಾವಿಗೀಡಾದರು.

ಈ ರೀತಿ ಸರಣಿಯಲ್ಲಿ ದಿನೇ ದಿನೇ ಸಾವುನೋವು ಎದುರಾಗುವದರೊಂದಿಗೆ, ಆ. 20 ರಂದು ಮಾದಾಪುರ ಬಳಿ ಮೂವತ್ತೊಕ್ಲು ನಿವಾಸಿ ಮುಕ್ಕಾಟಿರ ಸಾಬು ಉತ್ತಪ್ಪ ತನ್ನ ಮನೆ ಬಳಿ ಮಣ್ಣಿನೊಳಗೆ ಸಿಲುಕಿ ವಾರಗಟ್ಟಲೆ ಶವಕ್ಕಾಗಿ ಹುಡುಕಾಟ ನಡೆಸಬೇಕಾಗಿತ್ತು.

ಇದಾದ ಬಳಿಕ ಆ. 21 ರಂದು ಹಟ್ಟಿಹೊಳೆ ಬಳಿ ಹಾಡಗೇರಿ ನಿವಾಸಿ ಅಪ್ಪು (ಪ್ರಾನ್ಸಿಸ್ ಮೊಂತೆರೋ) ಭೂಕುಸಿತದಿಂದ ಸಾವಿಗೀಡಾದರೆ, ಆ. 22 ರಂದು ಮಕ್ಕಂದೂರು ಬಳಿ ಹೆಮ್ಮೆತ್ತಾಳುವಿನಲ್ಲಿ ಜೋಡಿ ಸಾವು ಸಂಭವಿಸಿತ್ತು. ಅಲ್ಲಿನ ನಿವಾಸಿಗಳಾದ ಚಂದ್ರವತಿ ಹಾಗೂ ಆಕೆಯ ಪುತ್ರ ಉಮೇಶ್ ರೈ ಮನೆ ಕುಸಿತದಿಂದ ಪ್ರಾಣ ಕಳೆದುಕೊಂಡಿದ್ದರು. ಅದೇ ದಿವಸ ಉದಯಗಿರಿ ಎಂಬಲ್ಲಿ ಬಾಬು ಎಂಬ ಆಟೋ ಚಾಲಕ ದುರಂತ ಸಾವನ್ನಪ್ಪಿದ್ದ.

ಈ ಎಲ್ಲ ಸಾವು-ನೋವಿನ ನಡುವೆ ಕೆ. ನಿಡುಗಣೆ ಗ್ರಾ.ಪಂ. ಸಮೀಪದ ಹೆಬ್ಬೆಟ್ಟಗೇರಿಯಲ್ಲಿ ಅದೇ ಆಗಸ್ಟ್ 23 ರಂದು ಬೆಳ್ಳಂಬೆಳಿಗ್ಗೆ ಉಮ್ಮವ್ವ ಬಿದ್ದಪ್ಪ (76) ಎಂಬ ವೃದ್ಧೆ ತನ್ನ ಮಕ್ಕಳು, ಮೊಮ್ಮಕ್ಕಳ ಕಣ್ಣೆದುರು ಭೂಕುಸಿತದ ಮಣ್ಣಿನೊಳಗೆ ಕಣ್ಮರೆಯಾಗಿದ್ದರು. ಅಲ್ಲಿ ಕೂಡ ವಾರದ ಕಾರ್ಯಾಚರಣೆ ಬಳಿಕ ಶವ ಪತ್ತೆಯಾಗಿತ್ತು.

ಪರಿಹಾರ ಕೇಂದ್ರಗಳು: ಇಂತಹ ಸಾವು-ನೋವು ಹಾಗೂ ಪ್ರಾಕೃತಿಕ ದುರಂತಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಿತ, ದೇಶದ ಹಲವೆಡೆಯೊಂದಿಗೆ ಕರ್ನಾಟಕದಿಂದ ವ್ಯಾಪಕ ನೆರವು ಲಭಿಸುವಂತಾಗಿ, ಪರಿಸ್ಥಿತಿ ಎದುರಿಸಲು ನೊಂದವರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದು ಆಸರೆ ಕಲ್ಪಿಸಲಾಯಿತು.

ಆದರೂ ಸರಕಾರವೇ ಅಂದಾಜಿಸಿರುವಂತೆ 800ಕ್ಕೂ ಅಧಿಕ ಮನೆಗಳು ಹಾನಿಗೊಂಡು, 1400 ರಷ್ಟು ಜಾನುವಾರುಗಳು ಪ್ರಾಣ ಕಳೆದುಕೊಂಡವು. ಕೃಷಿ ಭೂಮಿ, ಗದ್ದೆ, ಕಾಫಿತೋಟ ಇತ್ಯಾದಿ ನಷ್ಟದ ನಿಖರ ಅಂದಾಜು ಇಂದಿಗೂ ಅಸ್ಪಷ್ಟ. ಹೀಗಾಗಿ ಕಳೆದ ವರ್ಷಧಾರೆಯ ನೆನಪಿನಲ್ಲಿ ಜನತೆ ಪ್ರಸಕ್ತ ಮಳೆಗಾಲದ ಬಗ್ಗೆ ಆತಂಕಕ್ಕೆ ಒಳಗಾಗುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಯದೊಂದಿಗೆ ಜಿಲ್ಲಾಡಳಿತ ಸರ್ವ ಸನ್ನದ್ಧಗೊಂಡು, ಪರಿಸ್ಥಿತಿ ಎದುರಿಸುವ ಸಂಕಲ್ಪದೊಂದಿಗೆ ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ.

ಜನತೆಯೇ ನಿರೀಕ್ಷಿಸದ ಮಟ್ಟದಲ್ಲಿ ಜಿಲ್ಲಾಡಳಿತ ಎಲ್ಲ ಸವಾಲುಗಳನ್ನು ಎದುರಿಸಲು ವ್ಯವಸ್ಥೆ ಮಾಡಿಕೊಂಡಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಾಹಿತಿ ಕೇಂದ್ರಗಳು, ತುರ್ತು ಕರೆಗೆ ವ್ಯವಸ್ಥೆ, ಆರೋಗ್ಯ, ಪೊಲೀಸ್, ರಕ್ಷಣಾ ವ್ಯವಸ್ಥೆಗೆ ಕ್ರಮಗಳು, ಮೂರು ತಿಂಗಳ ಕಾಲ ನಮ್ಮೊಂದಿಗೇ ತಂಗಲಿರುವ ಕ್ಷಿಪ್ರ ಪಡೆಗಳು, ಸಾರಿಗೆ ವ್ಯವಸ್ಥೆ, ಕಣ್ಗಾವಲಿನಲ್ಲಿರಲು ಅಧಿಕಾರಿಗಳಿಗೆ ರಜೆ ರÀಹಿತ ಸೇವೆಗೆ ಆದೇಶ. ಹೀಗೆ... ಪ್ರತಿ ಕ್ಷಣದ ತೊಂದರೆಗೂ ಜನತೆಯೊಂದಿಗೆ, ಅವರ ರಕ್ಷಣೆಗೆ ಹಾಗೂ ಜಿಲ್ಲೆಯಲ್ಲಿ ಸಹಜ ಬದುಕಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಸರಕಾರ, ಜಿಲ್ಲಾಡಳಿತ ವ್ಯವಸ್ಥೆಗಳೊಂದಿಗೆ ನಮ್ಮೊಂದಿಗೆ ಇದೆ.

ಜನ ಭರವಸೆ ಇಟ್ಟು ಮುಂದಿನ ದಿನಗಳನ್ನು ಸ್ವೀಕರಿಸೋಣ.

-ಶ್ರೀಸುತ