ಮಡಿಕೇರಿ, ಜೂ. 2: ಕುಂದತ್ ಬೊಟ್ಟ್‍ಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್‍ಂಜ ಕುದುರೆ ಎಂಬ ಜನಪದೀಯ ಆಚರಣೆಯೊಂದಿಗೆ ದಕ್ಷಿಣ ಕೊಡಗಿನ ನಾನಾ ಭಾಗಗಳಲ್ಲಿ ಆಚರಿಸಲ್ಪಡುವ ‘ಬೋಡ್ ನಮ್ಮೆ’ಗೆ ಪಾರಣ ನಮ್ಮೆಯ ಮೂಲಕ ನಿನ್ನೆ ಭಕ್ತಿಭಾವ ಹಾಗೂ ಸಂಭ್ರಮದ ತೆರೆ ಬಿದ್ದಿತು.ತಲಕಾವೇರಿ ತೀರ್ಥೋದ್ಭವದ ಬಳಿಕ ಕುಂದದಲ್ಲಿ ವಿಶೇಷವಾಗಿ ದಕ್ಷಿಣ ಕೊಡಗಿನಲ್ಲಿ ಮಾತ್ರ ಕಂಡು ಬರುವ ಈ ವಿಶಿಷ್ಟ ಆಚರಣೆ ಆರಂಭಗೊಳ್ಳುತ್ತದೆ. ಇದಾದ ಬಳಿಕ ವಿವಿಧೆಡೆಗಳಲ್ಲಿ ಅಲ್ಲಲ್ಲಿನ ಕಟ್ಟು ಪಾಡಿಗೆ ಒಳಪಟ್ಟು ನಿಗದಿತ ಸಮಯದಲ್ಲಿ ಈ ಆಚರಣೆ ಕಂಡುಬರುತ್ತದೆ. ಅಂತಿಮವಾಗಿ ಬೇರಳಿನಾಡು ಎಂದು ಕರೆಯಲ್ಪಡುವ

(ಮೊದಲ ಪುಟದಿಂದ) ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಒಳಪಟ್ಟ 9 ಗ್ರಾಮಗಳ ವ್ಯಾಪ್ತಿಯಲ್ಲಿ ವರ್ಷಂಪ್ರತಿ ಮೇ 31 ಹಾಗೂ ಜೂನ್ 1 ರಂದು ಈ ಆಚರಣೆ ಪುರಾತನ ನಂಬಿಕೆಯಂತೆ, ಶ್ರದ್ಧಾಭಕ್ತಿ ಹಾಗೂ ಸಂಭ್ರಮದ ನಡುವೆ ಮುಕ್ತಾಯಗೊಳ್ಳುತ್ತದೆ.

ಬೇರಳಿನಾಡು ವಿಭಾಗದ ವಿವಿಧ ಗ್ರಾಮಗಳಲ್ಲಿ ವಿವಿಧ ವೇಷಧಾರಿಗಳ ಕಲರವ, ಚೀನಿದುಡಿ ಸಹಿತ ಮನೆ ಮನೆಗೆ ವೇಷಧಾರಿಗಳ ಸಹಿತವಾಗಿ ತೆರಳುವದು ನಡೆದು ಜೂನ್ 1ರ ಸಂಜೆ ಪಾರಣ ಮಾನಿ ಎಂಬ ಸ್ಥಳದಲ್ಲಿ ಕುದುರೆ ಹಾಗೂ ಬೃಹತ್ ಆನೆ ಆಕೃತಿಯನ್ನು ಒಳಗೊಂಡ ಧಾರ್ಮಿಕ ಕಟ್ಟು ಪಾಡಿನಂತೆ ಜರುಗಿತು. ಈ ವಿಭಾಗದ ಸಾವಿರಾರು ಮಂದಿ ಈ ವಿಶಿಷ್ಟವಾದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಪಾರಣಮಾನಿಯಲ್ಲಿನ ವಿಧಿ-ವಿಧಾನಗಳೊಂದಿಗೆ ಈ ವರ್ಷದ ಹಬ್ಬಕ್ಕೆ ಸಂಭ್ರಮದ ತೆರೆ ಬಿದ್ದಿತು.