ಸೋಮವಾರಪೇಟೆ, ಜೂ. 1: ಇಲ್ಲಿನ ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ತುರ್ತು ಬೇಕಾಗಿರುವ ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ.
ಇರುವ ಶೌಚಾಲಯದ ಬಾಗಿಲನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರ ಉಪಯೋಗದಿಂದ ದೂರವಿರಿಸಿದ್ದು, ಕಚೇರಿಗೆ ಆಗಮಿಸುವ ಮಂದಿ ಶೌಚಕ್ಕಾಗಿ ಬಸ್ ನಿಲ್ದಾಣ, ಯಾವದಾದರೂ ಹೊಟೇಲ್ಗಳಿಗೆ ತೆರಳಬೇಕಿದೆ.
ಎಲ್ಲೆಡೆ ಶೌಚಾಲಯ ನಿರ್ಮಿಸಿ ಶುಚಿತ್ವ ಕಾಪಾಡುವಂತೆ ಸರ್ಕಾರಗಳು ಘೋಷಣೆ ಕೂಗುತ್ತಿದ್ದು, ಕೇಂದ್ರ ಸರ್ಕಾರದಿಂದ ಸ್ವಚ್ಛ ಭಾರತ್ ಅಭಿಯಾನ್ ಅಡಿಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ತಾಲೂಕು ಆಡಳಿತದವರು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ಇರುವದು ವಿಪರ್ಯಾಸವೇ ಸರಿ.
ಗ್ರಾಮೀಣ ಭಾಗದಿಂದ ಬೆಳಗ್ಗೆಯೇ ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರು ತಕ್ಷಣಕ್ಕೆ ಕೆಲಸ ಆಗದೇ ಇರುವದರಿಂದ ಸಂಜೆಯವರೆಗೂ ಕಚೇರಿಯಲ್ಲೇ ಇರಬೇಕಾಗುತ್ತದೆ. ಇನ್ನು ನೆಮ್ಮದಿ ಕೇಂದ್ರದ ಪರಿಸ್ಥಿತಿಯಂತೂ ನೆಮ್ಮದಿ ಕಸಿಯುವಂತೆ ಮಾಡುತ್ತಿದೆ. ದಾಖಲಾತಿಗಳಿಗೆ ಸರ್ಕಾರವೇ ದಿನ ನಿಗದಿಗೊಳಿಸಿದ್ದರೂ ಇಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ಮಾತ್ರ ತಮ್ಮದೇ ಆದೇಶಗಳನ್ನು ಹೊರಡಿ ಸುತ್ತಿರುತ್ತಾರೆ. ನಾಳೆ ಬನ್ನಿ ನಾಡಿದ್ದು ಬನ್ನಿ ಎಂಬ ಮಾತುಗಳು ಇಲ್ಲಿ ಸರ್ವೆ ಸಾಮಾನ್ಯ.
ಇದರೊಂದಿಗೆ ಸಾರ್ವಜನಿಕ ರೊಂದಿಗೆ ಕನಿಷ್ಟ ಸೌಜನ್ಯದಿಂದ ವರ್ತಿಸದೇ ಇರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿರುತ್ತವೆ. ಕಚೇರಿ ಕೆಲಸ ಕಾರ್ಯಗಳಿಗೆ ಗಂಟೆಗಟ್ಟಲೆ ಕಾಯುವ ಸಾರ್ವಜ ನಿಕರು ಮೂತ್ರ ವಿಸರ್ಜನೆಗೂ ಬಸ್ ನಿಲ್ದಾಣದ ಶೌಚಾಲಯವನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ, ಚುನಾವಣಾ ಶಾಖೆ, ಖಜಾನಾಧಿಕಾರಿಗಳ ಕಚೇರಿ, ಆಹಾರ ಶಾಖೆ, ಕಂದಾಯ ಇಲಾಖಾ ಕಚೇರಿ, ಗ್ರಾಮ ಲೆಕ್ಕಿಗರು, ಭೂ ಮಾಪನ, ಭೂಮಿ ಶಾಖೆ, ಅಭಿಲೇಖಾಲಯ, ಶಿರಸ್ತೇದಾರ್ ಕಚೇರಿಗಳಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಸರ್ಕಾರಿ ದಾಖಲಾತಿಗಳಿಗೆ ತಾಲೂಕು ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ ಸಾರ್ವಜನಿಕರಿಗೆ ಮೂಲಭೂತ ಅವಶ್ಯಕತೆಯಾದ ಶೌಚಾಲಯವೇ ಇಲ್ಲದಿರುವದು ದುರಂತ. ತಾಲೂಕು ದಂಡಾಧಿ ಕಾರಿಗಳ ಕಚೇರಿಯಲ್ಲೇ ಇಂತಹ ಅವ್ಯವಸ್ಥೆಯಿರುವದು ಸಂಕೋಚದ ಸಂಗತಿ ಎಂದು ಭಗತ್ಸಿಂಗ್ ಸೇನೆಯ ಅಧ್ಯಕ್ಷ ಪಿ. ಮಧು ಅಭಿಪ್ರಾಯಿಸಿದ್ದಾರೆ. ತಾಲೂಕು ಕಚೇರಿ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು, ದುರಸ್ತಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. 68 ಲಕ್ಷದ ಕ್ರಿಯಾಯೋಜನೆಯೂ ಸಿದ್ಧವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಶೌಚಾಲಯವನ್ನು ಒದಗಿಸಿಕೊಡುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
- ವಿಜಯ್