ಮಡಿಕೇರಿ, ಮೇ 31: ಚೇರಂಬಾಣೆ - ಕೊಳಗದಾಳು - ಬೆಟ್ಟತ್ತೂರು ನಿತ್ಯ ಸಂಚರಿಸುವ ರಸ್ತೆಯೂ ಮರ ಇತ್ಯಾದಿ ಸಾಗಾಟದಿಂದ ತೀವ್ರ ಹದಗೆಟ್ಟಿರುವ ದರಿಂದ ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಇಂದು ಸಂಬಂಧಿಸಿದ ಗ್ರಾಮಸ್ಥರು ಕಾವೇರಿ ಸೇನೆ ಪ್ರಮುಖರೊಂದಿಗೆ ಪ್ರತಿಭಟನೆ ನಡೆಸಿದರು. ಅಲ್ಲದೆ ಚೇರಂಬಾಣೆ, ಕೊಳಗದಾಳು, ಬೆಟ್ಟತ್ತೂರು ಗ್ರಾಮವಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ ಕೇಳಿ ಬಂತು. ಮಳೆಗಾಲಕ್ಕೆ ಮುನ್ನ ರಸ್ತೆಯನ್ನು ಸರಿಪಡಿಸಿಕೊಡುವಂತೆ ಸಂಬಂಧಪಟ್ಟವರ ಗಮನ ಸೆಳೆದರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚೆನ್ನಕೇಶವ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಅಲ್ಲದೆ, ಈಗಾಗಲೇ ಸಂಬಂಧಪಟ್ಟ ರಸ್ತೆ ಅಭಿವೃದ್ಧಿಗೆ ಸರಕಾರದಿಂದ ಹಣ ಬಿಡುಗಡೆಯಾಗಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ಕಾಮಗಾರಿ ಪೂರೈಸುವದಾಗಿ ಆಶ್ವಾಸನೆ ನೀಡಿದರು. ಆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಗ್ರಾಮದ ಪ್ರಮುಖರಾದ ಕಡ್ಯದ ಪುಟ್ಟಯ್ಯ, ಬಾಚರಣಿಯಂಡ ಹ್ಯಾರಿ ತಮ್ಮಯ್ಯ ಸೇರಿದಂತೆ ರವಿಚಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಎಲ್ಲೆಡೆ ರಸ್ತೆಗಳು ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದಾಗ ಈ ಮಾರ್ಗವಾಗಿ ಬೆಟ್ಟತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರನ್ನು ಚೇರಂಬಾಣೆ ಹಾಗೂ ಇತರೆಡೆಯ ಪರಿಹಾರ ಕೇಂದ್ರಗಳಿಗೆ ಸಾಗಿಸಿದ್ದನ್ನು ಈ ಸಂದರ್ಭ ಗ್ರಾಮಸ್ಥರು ಅಧಿಕಾರಿಗೆ ನೆನಪಿಸಿದರು. ಸ್ಪಂದಿಸಿದ ಅಧಿಕಾರಿ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಆಶ್ವಾಸನೆ ನೀಡಿದರು.