ವೀರಾಜಪೇm,É ಮೇ 31: ನಿನ್ನೆ ದಿನ ಸಂಜೆ 6.45ರ ಸಮಯದಲ್ಲಿ ವೀರಾಜಪೇಟೆ ವಿಭಾಗಕ್ಕೆ ಭಾರೀ ಗುಡುಗು ಮಿಂಚು ಗಾಳಿ ಸಹಿತ ಮಳೆಯಿಂದ ಮೂರು ಕಡೆಗಳಲ್ಲಿ ಮರ ಬಿದ್ದು ಕಾರು ಶೆಡ್, ಕಾರು, ಎರಡು ಮನೆ ಮೂರು ವಿದ್ಯುತ್ ಕಂಬಗಳು ಜಖಂಗೊಂಡಿವೆ. ಇಲ್ಲಿನ ಚಿಕ್ಕಪೇಟೆಯಿಂದ ಬೋಯಿಕೇರಿಗೆ ಹೋಗುವ ರಸ್ತೆಯಲ್ಲಿರುವ ಸುನಿಲ್ ಲೋಬೋ ಎಂಬವರಿಗೆ ಸೇರಿದ ಶೆಡ್ ಮೇಲೆ ಮರ ಬಿದ್ದ ಪರಿಣಾಮ ಶೆಡ್ ಮುರಿದು ಬಿದ್ದು ಒಳಗಿದ್ದ ಕಾರು ಜಖಂಗೊಂಡಿದೆ. ರಾತ್ರಿ ಇಲ್ಲಿನ ಗಾಂಧಿನಗರದಲ್ಲಿ ಭಾರೀ ಮಳೆ ಗಾಳಿಗೆ ಎರಡು ಮನೆಗಳ ಮೇಲೆ ಮರ ಬಿದ್ದು ಮನೆ ಜಖಂಗೊಂಡಿರುವದಾಗಿ ದೂರು ಬಂದಿದ್ದು ಪ.ಪಂ. ಮುಖ್ಯಾಧಿಕಾರಿ ಮತ್ತಾಡ್ ಹಾಗೂ ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮಶೇಖರ್ ಖುದ್ದು ಭೇಟಿ ಮಾಡಿ ಮಹಜರು ನಡೆಸಿದರು.

ಗಾಂಧಿನಗರದ ವೀರಾಜಪೇಟೆ ಶಾಖೆಯ ಕಾಫಿ ಮಂಡಳಿ ಕಚೇರಿ ಬಳಿ ಮರ ಬಿದ್ದು ಒಂದು ವಿದ್ಯುತ್ ಕಂಬ ನೆಲಕ್ಕೆ ಬಾಗಿ ತಂತಿ ತುಂಡರಿಸಿದೆ. ಮೀನುಪೇಟೆಯಲ್ಲಿರುವ ಹನಿ ಸೊಸೈಟಿ ಬಳಿ ಭಾರೀ ಗಾತ್ರದ ಮರ ಉರುಳಿ ವಿದ್ಯುತ್ ಕಂಬವನ್ನು ಜಖಂಗೊಳಿಸಿದ್ದು ತಕ್ಷಣ ರಸ್ತೆಯಿಂದ ಮರವನ್ನು ತೆರವುಗೊಳಿಸಿದ್ದರಿಂದ ವಾಹನ ಸಂಚಾರಕ್ಕೆ ಯಾವದೇ ಅಡಚಣೆ ಉಂಟಾಗಿಲ್ಲ. ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಪಾರ್ಕ್‍ಗೆ ಮರವೊಂದು ಉರುಳಿ ಬಿದ್ದಿದೆ.

ಭಾರೀ ಮಳೆಗೆ ವೀರಾಜಪೇಟೆ ಪಟ್ಟಣದಲ್ಲಿ ಪಂಜರ್‍ಪೇಟೆ, ಮೀನುಪೇಟೆ ಹಾಗೂ ಚಿಕ್ಕಪೇಟೆಯಲ್ಲಿ ಮೂರು ವಿದ್ಯುತ್ ಕಂಬಗಳು ಜಖಂಗೊಂಡಿವೆ. ಇದರಿಂದಾಗಿ ನಿನ್ನೆ ರಾತ್ರಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು.