ರಾಜ್ಯ ಹೆದ್ದಾರಿ ತಡೆಗೆ ಮುಂದಾದ ಗ್ರಾಮಸ್ಥರು
ಸೋಮವಾರಪೇಟೆ, ಮೇ 31: ತಾಲೂಕಿನ ಹರಗ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸದ ಹಿನ್ನೆಲೆ ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿದ್ದು, ತಕ್ಷಣ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು, ತಪ್ಪಿದ್ದಲ್ಲಿ ಸೋಮವಾರಪೇಟೆ-ಶಾಂತಳ್ಳಿ-ಸುಬ್ರಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಸೋಮವಾರಪೇಟೆ ಯಿಂದ ಹರಗ ಗ್ರಾಮಕ್ಕೆ ಪ್ರತಿ ದಿನ ಸಂಜೆ 4 ಗಂಟೆಗೆ ಖಾಸಗಿ ಬಸ್ ಸಂಚರಿಸುತ್ತಿತ್ತು. ಕಳೆದ ಮೂರು ತಿಂಗಳ ಹಿಂದೆ ಈ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟುಮಾಡಿದೆ.
ಪಟ್ಟಣದ ಶಾಲಾ ಕಾಲೇಜುಗಳಿಗೆ ಹರಗ ಗ್ರಾಮದಿಂದ ಆಗಮಿಸುವ ಮಕ್ಕಳು ಹಾಗೂ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪ್ರಮುಖ ಸಂಪರ್ಕ ಸೇತುವಾಗಿದ್ದ ಖಾಸಗಿ ಬಸ್ ಸ್ಥಗಿತದಿಂದಾಗಿ ಸಮಸ್ಯೆ ಸೃಷ್ಟಿಯಾಗಿದ್ದು, ಸರ್ಕಾರಿ ಬಸ್ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಶಾಲಾ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಂಜೆ 4 ಗಂಟೆಗೆ ಪಟ್ಟಣಕ್ಕೆ ಆಗಮಿಸಿದರೆ ಗ್ರಾಮಕ್ಕೆ ತೆರಳಲು 6.30ರವರೆಗೆ ಬಸ್ಗಾಗಿ ಕಾಯಬೇಕಿದೆ. ಸಂಜೆ 7.30ಕ್ಕೆ ಮನೆ ಸೇರುವಂತಾಗಿದೆ. ಈ ಹಿನ್ನೆಲೆ ಸರ್ಕಾರಿ ಬಸ್ ಮಾರ್ಗ ಅನಿವಾರ್ಯವಾಗಿದೆ ಎಂದು ಗ್ರಾಮ ಸಮಿತಿ ಅಧ್ಯಕ್ಷ ಧರ್ಮಪ್ಪ ತಿಳಿಸಿದ್ದಾರೆ.
ಪ್ರತಿದಿನ ಸಂಜೆ 4.10ಕ್ಕೆ ಸೋಮವಾರಪೇಟೆ ಪಟ್ಟಣದಿಂದ ಹರಗ ಗ್ರಾಮಕ್ಕೆ ತೆರಳಿ ನಂತರ ಪಟ್ಟಣಕ್ಕೆ ವಾಪಸ್ ಬರುವಂತೆ ನೂತನ ಬಸ್ ಒದಗಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆತಡೆದು ಪ್ರತಿಭಟನೆ ನಡೆಸುವದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರಾದ ಶರಣ್, ಪ್ರಕಾಶ್ ಅವರುಗಳು ಅಭಿಪ್ರಾಯಿಸಿದ್ದಾರೆ.