ಗೋಣಿಕೊಪ್ಪ ವರದಿ, ಜೂ. 1 : ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಆರಂಭ ಗೊಳ್ಳಲಿರುವ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಿಂದ ಕಕ್ಷಿದಾರರುಗಳ ಖರ್ಚು ಹಾಗೂ ಸಮಯ ಒತ್ತಡ ತಗ್ಗಿಸಲು ಸಹಕಾರಿಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ್ ಅಭಿಪ್ರಾಯಪಟ್ಟರು.ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಪೊನ್ನಂಪೇಟೆ ವಕೀಲರ ಸಂಘದÀ ಸಹಯೋಗದಲ್ಲಿ ಆರಂಭಗೊಂಡಿರುವ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಇಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ ಆರಂಭ ಗೊಂಡಿರುವದರಿಂದ ಕಕ್ಷಿದಾರರಿಗೆ ದೂರದ ನ್ಯಾಯಾಲಯಕ್ಕೆ ತೆರಳುವ ವೆಚ್ಚ ಹಾಗೂ ಸಮಯ, ಒತ್ತಡ ತಗ್ಗುವಂತಾಗಿದೆ. ಹಿರಿಯಶ್ರೇಣಿ ನ್ಯಾಯಾಲಯ ಸ್ಥಾಪನೆ ಈಡೇರಿರುವದು ಕಕ್ಷಿದಾರನಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು. ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವ ವಕೀಲರು, ಸಿಬ್ಬಂದಿಗೆ ಮಾತ್ರವಲ್ಲದೆ ಕಕ್ಷಿದಾರರಿಗೂ ಕೂಡ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಪೊನ್ನಂಪೇಟೆ ಹಿರಿಯ ನ್ಯಾಯಾಧೀಶ ಡಿ. ಆರ್. ಜಯಪ್ರಕಾಶ್ ಮಾತನಾಡಿ, ದೂರದಲ್ಲಿರುವ ನ್ಯಾಯಾಲಯಕ್ಕೆ ತೆರಳಲು ಕಕ್ಷಿದಾರ ಅನುಭವಿಸುತ್ತಿದ್ದ ಕಷ್ಟವನ್ನು ಅರಿತು ಪೊನ್ನಂಪೇಟೆಯಲ್ಲಿ ಹಿರಿಯಶ್ರೇಣಿಯ ನ್ಯಾಯಾಲಯ ಸ್ಥಾಪಿಸಲಾಗಿದೆ. ಶೀಘ್ರ ಕಡತ ವಿಲೇವಾರಿಗೆ ನ್ಯಾಯವಾದಿಗಳು ಕಾಳಜಿವಹಿಸಬೇಕಿದೆ ಎಂದರು.

ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್. ಡಿ. ಕಾವೇರಿಯಪ್ಪ ಮಾತನಾಡಿ, ಹಿರಿಯ ಶ್ರೇಣಿಯ ನ್ಯಾಯಾಲಯವು ವಾರಕ್ಕೆ ಎರಡು ದಿನ ಕಾರ್ಯನಿರ್ವಹಿಸಲಿದೆ. ಶುಕ್ರವಾರ ಹಾಗೂ ಶನಿವಾರ ಕಕ್ಷಿದಾರರಿಗೆ ನ್ಯಾಯಾಲಯದ ಅವಕಾಶ ಸಿಗಲಿದೆ ಎಂದರು. ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶ ಗಿರಿಗೌಡ ಮಾತನಾಡಿದರು. ಉಚ್ಚ ನ್ಯಾಯಾಲಯದ ವಕೀಲ ಮಾಚಿಮಂಡ ಸುರೇಶ್ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ. ಜಿ. ರಾಕೇಶ್, ಪೊನ್ನಂಪೇಟೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಅಜ್ಜಿನಿಕಂಡ ಭೀಮಯ್ಯ, ಉಪಾಧ್ಯಕ್ಷ ಕೊಂಗಂಡ ಗಣಪತಿ ಉಪಸ್ಥಿತರಿದ್ದರು. ಸಂಜೀವ್ ನಿರೂಪಿಸಿದರು. ಅನಿತಾ ಪ್ರಾಸ್ತಾವಿಕ ಮಾತನಾಡಿದರು.