ಸಿದ್ದಾಪುರ ಜೂ 1: ಮತ್ತೊಂದು ಪುಂಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇತ್ತೀಚೆಗೆ ಅಭ್ಯತ್ ಮಂಗಲ ಹಾಗೂ ನೆಲ್ಯಹುದಿಕೇರಿ ಭಾಗದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಪೈಕಿ ಕಳೆದ ಐದು ದಿನಗಳ ಹಿಂದೆ ಪುಂಡಾನೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಚೆಟ್ಟಳ್ಳಿಯ ಕಾಫಿ ಬೋರ್ಡ್ನ ಕಾಫಿ ತೋಟದೊಳಗೆ ಅಂದಾಜು 30 ರಿಂದ 35 ವರ್ಷದೊಳಗಿನ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲಾಯಿತು.ಕಳೆದ ಎರಡು ದಿನಗಳ ಹಿಂದೆ ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಕಾಫಿ ತೋಟದ ಒಳಗೆ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ 8 ಸಾಕಾನೆಗಳ ಸಹಕಾರದಿಂದ ಪ್ರಯತ್ನಿಸಿತ್ತು. ಗಾಬರಿಗೊಂಡಿದ್ದ ಸಲಗವು ಹಿಂಡಿನಿಂದ ಬೇರ್ಪಟ್ಟು ಬೇರೆಡೆ ತೆರಳಿತ್ತು. ಅರಣ್ಯ ಇಲಾಖಾಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯಾಧಿಕಾರಿ ನೆಲ್ಯಹುದಿಕೇರಿ ಕಾಫಿ ತೋಟದ ಒಳಗೆ ಕಾಡಾನೆಗಾಗಿ ಕಾರ್ಯಾಚರಣೆ ನಡೆಸುವಾಗ ಒಂಟಿ ಸಲಗ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಭಾಗಕ್ಕೆ ಕಾಲ್ಕಿತ್ತ ಒಂಟಿ ಸಲಗದ ಚಲನವಲನವನ್ನು ಗಮನಿಸಿದ ಅರಣ್ಯ ಇಲಾಖೆಯು ಚೆಟ್ಟಳ್ಳಿಯ ಕಾಫಿ ತೋಟದ ಒಳಗೆ ಇರುವದಾಗಿ ಕಂಡು ಹಿಡಿದರು.
ಈ ಹಿನ್ನೆಲೆಯಲ್ಲಿ ಇಂದು 8 ಸಾಕಾನೆಗಳೊಂದಿಗೆ ಚೆಟ್ಟಳ್ಳಿಯಲ್ಲಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಗೆ ಒಂಟಿ ಸಲಗವು ಪತ್ತೆಯಾಗಿ ವನ್ಯಜೀವಿ ಡಾ.ಮುಜೀಬ್ ರಹಮಾನ್ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದರು. ಸಲಗವು ಸ್ವಲ್ಪ ದೂರ ಓಡಿ, ಬಳಿಕ ನೆಲಕ್ಕುರುಳಿತು. ಬಳಿಕ ಸಿಬ್ಬಂದಿಗಳು ಪುಂಡಾನೆಯ ತಲೆಗೆ ನೀರು ಸುರಿದು, ಕಾಡಾನೆಯನ್ನು ಹಗ್ಗದಿಂದ ಕಟ್ಟಿ ಬಂಧಿಸಿದರು. ನಂತರ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಲಾರಿಗೆ ಕರೆತರುವ ಸಂದರ್ಭ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಸಾಕಾನೆಗಳಾದ ಅಭಿಮನ್ಯು ಹಾಗೂ ಹರ್ಷ ಲಾರಿಯವರೆಗೆ ಎಳೆದು ತಂದವು. ಬಳಿಕ ಸೆರೆಯಾದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು.
ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆ ಸೆರೆಗೆ ಒತ್ತಾಯ: ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಗುಹ್ಯ, ಇಂಜಲಗರೆ, ಕರಡಿಗೋಡು ಹಾಗೂ ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಪುಂಡಾನೆಗಳನ್ನು ಸೆರೆ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಒತ್ತಾಯಿಸಿದ್ದಾರೆ. ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದು, ಕಾಡಾನೆಗಳನ್ನು ಸೆರೆಹಿಡಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.