ಕುಶಾಲನಗರ, ಮೇ 30: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ಆಗ್ರಹಿಸಿ ಕುಶಾಲನಗರದಲ್ಲಿ ತಾ. 31 ರಂದು (ಇಂದು) 1 ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕುಶಾಲನಗರ ಪಟ್ಟಣ ಪಂಚಾಯ್ತಿ ಕಚೇರಿ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಮಿತಿಯ 5 ಮಂದಿ ಪ್ರಮುಖರು ಉಪವಾಸ ಕೈಗೊಳ್ಳಲಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಸಮಿತಿ ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ಕೆ.ಜಿ.ಮನು, ಮಂಡೇಪಂಡ ಬೋಸ್ ಮೊಣ್ಣಪ್ಪ, ಡಿ.ಆರ್.ಸೋಮಶೇಖರ್, ಕುಶಾಲನಗರ ಪಟ್ಟಣ ಬಹುತೇಕ ಕಾವೇರಿ ನದಿ ತಟಗಳಿಂದ ಸುತ್ತುವರೆದಿದ್ದು ಪಟ್ಟಣದ ಅವೈಜ್ಞಾನಿಕ ಬೆಳವಣಿಗೆಯಿಂದ ಕಲುಷಿತ ನೀರು, ತ್ಯಾಜ್ಯ ಜೀವನದಿ ಕಾವೇರಿಗೆ ನೇರವಾಗಿ ಸೇರುವ ಮೂಲಕ ಉಗಮ ಸ್ಥಾನದಲ್ಲಿಯೇ ನೀರು ಕಲುಷಿತವಾಗುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.
ಪಟ್ಟಣದ ಬಹುತೇಕ ಬಡಾವಣೆಗಳ ಕಲುಷಿತ ತ್ಯಾಜ್ಯ (ಶೌಚ ತ್ಯಾಜ್ಯಗಳು ಸೇರಿದಂತೆ) ನೇರವಾಗಿ ಕಾವೇರಿ ನದಿ ಒಡಲು ಸೇರಿ ನದಿ ನೀರು ಕಲುಷಿತ ಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ಲಿಖಿತವಾಗಿ ಹಾಗೂ ಮೌಖಿಕವಾಗಿ ತರಲಾಗಿದೆ. ಆದರೆ ಇದುವರೆಗೆ ಪಂಚಾಯ್ತಿ ಮೂಲಕ ಕಾವೇರಿ ನದಿ ಸಂರಕ್ಷಣೆಗೆ ಯಾವದೇ ರೀತಿಯ ತಾತ್ಕಾಲಿಕ ಯೋಜನೆ ಅಥವಾ ಕ್ರಮ ಕೈಗೊಳ್ಳದಿರುವದು ವಿಷಾದನೀಯ ಎಂದು ತಿಳಿಸಿದ್ದಾರೆ.