ಸೋಮವಾರಪೇಟೆ, ಮೇ 30: ಪಟ್ಟಣದಲ್ಲಿ ಬ್ರಿಟೀಷರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಕಟ್ಟಡವನ್ನು ಸ್ವಾತಂತ್ರ್ಯಾನಂತರ ಸರ್ಕಾರಿ ಕಚೇರಿಯನ್ನಾಗಿ ಬಳಕೆ ಮಾಡಿಕೊಳ್ಳ ಲಾಗುತ್ತಿದ್ದು, ಪ್ರಸ್ತುತ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರ ಕಚೇರಿ ಇದೇ ಕಟ್ಟಡದಲ್ಲಿದೆ.
ಇದರೊಂದಿಗೆ ಭೂಮಾಪನಾ ಇಲಾಖೆ, ಕಂದಾಯ ಪರಿವೀಕ್ಷಕರು, ಕಾರ್ಮಿಕ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯೂ ಇದೇ ಕಟ್ಟಡ ಸಂಕೀರ್ಣದಲ್ಲಿದ್ದು, ಶಾಸಕರ ಕಚೇರಿಗೆ ಮಾತ್ರ ಪ್ರತಿ ವರ್ಷ ಛಾವಣಿ ಭಾಗ್ಯ ನೀಡಲಾಗುತ್ತಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕಚೇರಿಯ ಸಿಮೆಂಟ್ ಮೇಲ್ಛಾವಣಿ ಶಿಥಿಲಗೊಂಡಿದ್ದು, ಪ್ರತಿ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ. ಇದನ್ನು ತಡೆಗಟ್ಟಲು ಕಳೆದ ಮೂರು ವರ್ಷಗಳ ಹಿಂದೆ ಸಿಮೆಂಟ್ ಶೀಟ್‍ಗಳನ್ನು ಮೇಲ್ಛಾವಣಿಯ ಮೇಲ್ಭಾಗ ಅಳವಡಿಸಲಾಗಿತ್ತು. ಮಳೆಗಾಲದಲ್ಲಿ ಭಾರೀ ಗಾಳಿ ಮಳೆಗೆ ಸಿಮೆಂಟ್ ಶೀಟ್‍ಗಳು ಹಾರಿಹೋದ ನಂತರ ಕಳೆದ ವರ್ಷ ಜಿಂಕ್ ಶೀಟ್ ಹಾಕಲಾಗಿತ್ತು. ಮಳೆಯೊಂದಿಗೆ ಗಾಳಿಯ ಆರ್ಭಟಕ್ಕೆ ಜಿಂಕ್ ಶೀಟ್‍ಗಳೂ ಹಾರಿಹೋಗಿದ್ದು, ಈ ವರ್ಷ ಮತ್ತೊಮ್ಮೆ ಮೇಲ್ಛಾವಣಿ ಅಳವಡಿಸಲಾಗಿದೆ.
ಶಾಸಕರ ಕಚೇರಿ ಪಟ್ಟಣದ ಮೇಲ್ಭಾಗದಲ್ಲಿದ್ದು, ಗಾಳಿಯ ರಭಸ ನೇರವಾಗಿ ಕಚೇರಿಗೆ ನುಗ್ಗುತ್ತದೆ. ಮಳೆಯೊಂದಿಗೆ ಜೋರಾಗಿ ಗಾಳಿ ಬೀಸಿದರೆ ಜಿಂಕ್‍ಶೀಟ್‍ಗಳು ಹಾರಿ ಹೋಗುತ್ತಿದ್ದು, ಈ ವರ್ಷ ಕಬ್ಬಿಣದ ಪೈಪ್‍ಗಳನ್ನು ಅಳವಡಿಸಿ ಛಾವಣಿಯನ್ನು ಬಿಗಿಗೊಳಿಸಲಾಗಿದೆ.
ಪ್ರತಿ ವರ್ಷವೂ ಹೊಸದಾಗಿ ಛಾವಣಿ ಭಾಗ್ಯ ಕಾಣುತ್ತಿರುವ ಶಾಸಕರ ಕಚೇರಿಯ ‘ಛಾವಣಿ ಸಮಸ್ಯೆ’ ಈ ವರ್ಷಕ್ಕೆ ಬಗೆಹರಿಯಲಿದೆಯೇ ಎಂಬದನ್ನು ಮಳೆಗಾಲ ನಿರ್ಧರಿಸಲಿದೆ!
- ವಿಜಯ್