ಗೋಣಿಕೊಪ್ಪಲು, ಮೇ 30: ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮವಾಗಿ ಲಾರಿಯಲ್ಲಿ ಹಲಸು,ಹಾಗೂ ಹೆಬ್ಬಲಸು ತುಂಬಿಸಿಕೊಂಡು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಲಾರಿ ಸಹಿತ ಮರವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಟಿ. ಶೆಟ್ಟಿಗೇರಿ ವ್ಯಾಪ್ತಿಯ ತಾವಳಗೇರಿ ಕಡೆಯಿಂದ ಲಾರಿ (ಕೆಎ-01 ಎಸಿ 1229)ಯಲ್ಲಿ ಸಿಲ್ವರ್ ಓಕ್ ಮರಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಸಂಶಯಗೊಂಡ ಸಿಬ್ಬಂದಿಗಳು ತಪಾಸಣೆ ಮಾಡುತ್ತಿದ್ದಂತೆಯೇ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಪರಿಶೀಲನೆ ನಡೆಸಿದ ವೇಳೆ ಲಾರಿಯ ಅಡಿ ಭಾಗದಲ್ಲಿ ಹಲಸು ಹಾಗೂ ಹೆಬ್ಬಲಸು ನಾಟಗಳು ಸಿಕ್ಕಿವೆ. ತಾವಳಗೇರಿ ಗ್ರಾಮದ ಆರೋಪಿ ಪಿ.ಯು.ಮುಖೇಶ್ ಹಾಗೂ ಲಾರಿ ಮಾಲೀಕ ಬೆಂಗಳೂರು ಮೂಲದ ಮಸೂದ್ ಮೇಲೆ ಅರಣ್ಯ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿದೆ.
ಮರದ ನಾಟಗಳು ಸೇರಿದಂತೆ ಲಾರಿಯ ಒಟ್ಟು ಮೌಲ್ಯ ರೂ. 10 ಲಕ್ಷವೆಂದು ಅಂದಾಜಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾದಿಕಾರಿ ಮರಿಯ ಕ್ರಿಸ್ತರಾಜ್ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ವಲಯ ಅರಣ್ಯದಿಕಾರಿ ಹೆಚ್.ಎಸ್. ಗಂಗಾಧರ, ಸಿಬ್ಬಂದಿಗಳಾದ ರಾಜೇಶ್, ಸಂಜಯ್, ಚೇತನ್ ಇತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
-ಹೆಚ್.ಕೆ.ಜಗದೀಶ್.