ನವದೆಹಲಿ, ಮೇ 30: ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ 353 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟದ ನೂತನ ಸರಕಾರವು ಇಂದು ಅಸ್ತಿತ್ವಕ್ಕೆ ಬರುವದರೊಂದಿಗೆ; ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ದ್ವಿತೀಯ ಅವಧಿಗೆ ಈ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ವಿಶ್ವದ ವಿವಿಧ ನಾಯಕರು, ದೇಶದ ಗಣ್ಯಾತಿಗಣ್ಯರು, ಸಂತರ ಸಮ್ಮುಖದಲ್ಲಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ದ್ವಿತೀಯ ಅವಧಿಗೆ ಅಧಿಕಾರದ ಗದ್ದುಗೆ ಏರಿರುವ ಪ್ರಧಾನಿ ಮೋದಿ ಸೇರಿದಂತೆ ಸಂಪುಟದಲ್ಲಿ ಇಂದು 58 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸರ್ಕಾರದಲ್ಲಿ 25 ಮಂದಿ ಸಂಪುಟ ದರ್ಜೆ ಸಚಿವರು, ಕೇಂದ್ರ ಸಹಾಯಕ ಸಚಿವರಾಗಿ 9 ಮಂದಿ ಸ್ಥಾನ ಪಡೆಯುವದರೊಂದಿಗೆ ರಾಜ್ಯ ಸಹಾಯಕ ಸಚಿವರಾಗಿ 24 ಮಂದಿ ಸ್ಥಾನ ಪಡೆದರು. ಈ ಪೈಕಿ ಕರ್ನಾಟಕದಿಂದ ಮೋದಿ ಸಂಪುಟದಲ್ಲಿ ಇಂದು ಮಾಜಿ ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಕೊಡಗಿನ ಅಳಿಯ ಡಿ.ವಿ. ಸದಾನಂದಗೌಡ ದ್ವಿತೀಯ ಅವಧಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂತೆಯೇ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್‍ಜೋಶಿ ಕೂಡ ಕರ್ನಾಟಕದಿಂದ ಕೇಂದ್ರ ಸಂಪುಟಕ್ಕೆ ಪ್ರಥಮವಾಗಿ ಸೇರ್ಪಡೆಗೊಂಡಿದ್ದಾರೆ.
ಆ ಮುನ್ನ ಹಿರಿಯ ಸಚಿವರಾಗಿ ರಾಜ್‍ನಾಥ್‍ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲ ಸೀತಾರಾಮನ್ ರವಿಶಂಕರ್ ಪ್ರಸಾದ್, ಸ್ಮøತಿ ಇರಾನಿ ಮೊದಲಾದವರು ದ್ವಿತೀಯ ಅವಧಿಗೆ ಸ್ಥಾನ ಪಡೆದಿದ್ದು, ಹಿಂದಿನ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಕೂಡ ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿರುವದು ಇಲ್ಲಿ ಗಮನಾರ್ಹ. ಅಲ್ಲದೆ ರಾಜ್ಯ ಸಹಾಯಕ ಸಚಿವರಾಗಿ ಕರ್ನಾಟಕದಿಂದ ಬೆಳಗಾವಿ ಸಂಸದ ಸುರೇಶ್ ಸಿ. ಅಂಗಡಿ ಅವರು ಕೂಡ ಈ ಬಾರಿ ಕೇಂದ್ರದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಮೋದಿ ಸಂಪುಟದ 58 ನೂತನ ಸಚಿವರಲ್ಲಿ ಕರ್ನಾಟಕದಿಂದ ನಾಲ್ವರು ಸ್ಥಾನವನ್ನು ಪಡೆದಂತಾಗಿದೆ ಅಲ್ಲದೆ 6 ಮಂದಿ ಮಹಿಳೆಯರು ಹಾಗೂ ಇಬ್ಬರು ನವ ಯುವಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೋದಿ ಸಂಪುಟದ ಸಚಿವರುಗಳಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ವಿವಿಧ ದೇಶಗಳ ಗಣ್ಯರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪಪ್ರಧಾನಿ
(ಮೊದಲ ಪುಟದಿಂದ) ಲಾಲ್‍ಕೃಷ್ಣ ಅಡ್ವಾಣಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ವರಿಷ್ಠ ಮುರಳಿಮನೋಹರ್ ಜೋಷಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವಿವಿಧ ರಾಜ್ಯಗಳ ಇತರ ಮುಖ್ಯಮಂತ್ರಿಗಳು, ಸೇನಾ ಮುಖ್ಯಸ್ಥರು, ಆಹ್ವಾನಿತ ಅತಿಥಿಗಳೊಂದಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದಸ್ವಾಮೀಜಿ, ಕಂಚಿಕಾಮಕೋಟಿ ಶಂಕರಾ ಚಾರ್ಯರು, ಈಶಾ ಫೌಂಡೇಶನ್‍ನ ಶ್ರೀ ವಾಸುದೇವ್ (ಜಗ್ಗಿಬಾಬಾ), ಇನ್ಫೋಸಿಸ್ ಸುಧಾಮೂರ್ತಿ ಮುಂತಾದವರು ಪಾಲ್ಗೊಂಡಿದ್ದು ವಿಶೇಷ. ಭಾರತದ 8 ನೆರೆಯ ರಾಷ್ಟ್ರಗಳ ಗಣ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಚೀನಾ ಮತ್ತು ಪಾಕ್ ಪ್ರಮುಖರನ್ನು ಆಹ್ವಾನಿಸದಿದ್ದದ್ದು ಗೋಚರಿಸಿತು. ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ, ಉತ್ತರಪ್ರದೇಶದಿಂದ ಮಾಯವತಿ, ಅಖಿಲೇಶ್ ಯಾದವ್, ರಾಜಸ್ತಾನ್ ಮುಖ್ಯಮುಂತ್ರಿ ಅಶೋಕ್ ಗೆಲ್ಹೋಟ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ಪಂಥ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ತಮಿಳು ನಾಡಿನ ಸ್ಟಾಲಿನ್, ಮುಂತಾದವರು ಪ್ರಮಾಣವಚನ ಸಮಾರಂಭದಿಂದ ದೂರ ಉಳಿದಿದ್ದರು. ಇನ್ನೊಂದೆಡೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮೋದಿ ಪ್ರಮಾಣವಚನ ಬೆನ್ನಲ್ಲೆ ಘೋಷಣೆಗಳು ಮುಗಿಲು ಮುಟ್ಟುದರೊಂದಿಗೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸಂಭ್ರಮಿಸುವ ಮೂಲಕ ಸಿಹಿ ಹಂಚಿದರು. ರಾಷ್ಟ್ರಪತಿ ಭವನದ ಮುಂದೆಯೂ ಮೋದಿ ಪರ ಘೋಷಣೆಗಳು ಕೇಳಿ ಬಂದವು.