*ಗೋಣಿಕೊಪ್ಪಲು, ಮೇ 30: ಕಾವ್ಯ ವಾಚನ, ಭಾವಗೀತೆ, ಕುಂಚಗಾಯನ, ಭರತ ನಾಟ್ಯ, ಸನ್ಮಾನ, ಪುಸ್ತಕ ಬಿಡುಗಡೆ, ಹುಟ್ಟು ಹಬ್ಬ ಆಚರಣೆ ಹೀಗೆ ಹಲವು ಕಾರ್ಯಕ್ರಮಗಳು 7ನೇ ಮನೆ ಮನೆ ಕವಿಗೋಷ್ಠಿಗೆ ಸಾಕ್ಷಿ ನುಡಿಯಿತು.

ವೀರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ಮುಲ್ಲೇಂಗಡ ಮದೋಶ್ ಪೂವಯ್ಯ ಹಾಗೂ ರೇವತಿ ಪೂವಯ್ಯ ದಂಪತಿಗಳ ಮನೆಯಲ್ಲಿ ನಡೆದ ಮನೆ ಮನೆ ಕವಿಗೋಷ್ಠಿ ಅರ್ಥಪೂರ್ಣವಾಗಿ ಜರುಗಿತು. ಜಿಲ್ಲಾ ಮನೆ ಮನೆ ಕಾವ್ಯಗೋಷ್ಠಿ ಸಂಘಟನೆಯ ಸಂಚಾಲಕ ವೈಲೇಶ್ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ದಂಪತಿಗಳು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಸಾಹಿತ್ಯದ ಶ್ರೀಮಂತಿಕೆಯನ್ನು ಬೆಳೆಸುವ ಉದ್ದೇಶದಿಂದ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಉದಯೋನ್ಮುಖ ಬರಹಗಾರರಿಗೆ ಹೆಚ್ಚಿನ ಪೆÇ್ರೀತ್ಸಾಹ ಸಿಗುತ್ತಿದೆ ಎಂದು ಸಂಚಾಲಕ ವೈಲೇಶ್ ಅಭಿಪ್ರಾಯ ಹಂಚಿಕೊಂಡರು.

ಕವಿಗೋಷ್ಠಿ ಪ್ರಾಯೋಜಕರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಲ್ಲೇಂಗಡ ಮದೋಶ್ ಪೂವಯ್ಯ ಈ ಸಂದರ್ಭ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಮನೆ ಮನೆಗಳಲ್ಲಿ ಕಾವ್ಯ, ಸಾಹಿತ್ಯ ಗೋಷ್ಠಿಗಳನ್ನು ಮಾಡುವ ಮೂಲಕ ಕೊಡಗಿನ ಸಾಹಿತ್ಯ ಮತ್ತು ಕಲೆಗಳನ್ನು ಶ್ರೀಮಂತಗೊಳಿಸಬೇಕಾಗಿದೆ ಎಂದರು.

ಕವಿ, ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ಅಧಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಇದೇ ಸಂದರ್ಭ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ಇಳೆ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮದಲ್ಲಿ ಮುಲ್ಲೇಂಗಡ ದರ್ಶನ್ ಸುಬ್ಬಯ್ಯ ಅವರ 101ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕವಿಗೋಷ್ಠಿಯಲ್ಲಿ ನರ್ಸರಿ ವಸಂತ, ಶಿವದೇವಿ ಅವನೀಶ್ ಚಂದ್ರ, ನಾ ಕನ್ನಡಿಗ, ಕಸ್ತೂರಿ ಗೋವಿಂದಮ್ಮಯ್ಯ, ಪೆÇ್ರ. ಸುಶೀಲ, ರೇವತಿ ಪೂವಯ್ಯ, ನಿವ್ಯ ಕಾವೇರಮ್ಮ, ನಾಯಕಂಡ ಬೇಬಿ ಚಿಣ್ಣಪ್ಪ, ಜಯಲಕ್ಷ್ಮಿ, ಪವಿತ ರಜನ್, ಲೀಲಾ ದಯಾನಂದ, ಮೊಣ್ಣಂಡ ಶೋಭಾ ಸುಬ್ಬಯ್ಯ, ಮೂಡಗದ್ದೆ ವಿನೋದ್, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ವೈಲೇಶ್, ಜಗದೀಶ್ ಜೋಡುಬೀಟಿ ಕಾವ್ಯ ವಾಚಿಸಿದರು.

ಚಿತ್ರ ಕಲಾವಿದ ಬಿ.ಆರ್. ಸತೀಶ್ ಅವರ ಕುಂಚದಿಂದ ವಿವಿಧ ಚಿತ್ರಕಲೆಗಳು ಅರಳಿ ಮನ ಉಲ್ಲಾಸ ನೀಡಿತು. ಜೊತೆಗೆ ಗಾಯಕ ಟಿ.ಡಿ. ಮೋಹನ್ ಅವರಿಂದ ಭಾವಗೀತೆ, ಭಕ್ತಿ ಗೀತೆಗಳು ಸುಮಧುರವಾಗಿ ಮೂಡಿ ಬಂದವು. ಪುಟಾಣಿ ದೀಪ್ತಿ ಅವರಿಂದ ಭರತನಾಟ್ಯ ಕಲಾ ಪ್ರಿಯರನ್ನು ಆಕರ್ಷಿಸಿತು.

ದ್ವಿತೀಯ ಪಿ.ಯು.ಸಿಯಲ್ಲಿ ಕನ್ನಡ ವಿಭಾಗದಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿನಿ ಪಿ.ಎಸ್. ರೇಷ್ಮ ಅವರನ್ನು ಕನ್ನಡ ವಿಭಾಗದ ಪ್ರಾಧ್ಯಾಪಕಿ ಮುಲ್ಲೇಂಗಡ ರೇವತಿ ಪೂವಯ್ಯ ಅವರ ನೇತೃತ್ವದಲ್ಲಿ ಸನ್ಮಾನಿಸಿ ಪೆÇ್ರೀತ್ಸಾಹಿಸಲಾಯಿತು. ಕಾರ್ಯಕ್ರಮಕ್ಕೆ ವ್ಯವಸ್ಥೆಯನ್ನು ಮಾಡಿದ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲಾ ಸಾಹಿತಿ, ಕಲಾವಿದರಿಗೆ ರುಚಿಕಟ್ಟಾದ ಅಡುಗೆಯನ್ನು ತಯಾರಿಸಿ ಉಣಬಡಿಸುವ ಮೂಲಕ ಮುಲ್ಲೇಂಗಡ ರೇವತಿ ಪೂವಯ್ಯ ಅವರು ಕೊಡಗಿನ ಆತಿಥ್ಯವನ್ನು ಮತ್ತು ಕೊಡಗಿನ ಸಾಂಪ್ರದಾಯಿಕ ರುಚಿಯಾದ ಅಡುಗೆಯನ್ನು ಪರಿಚಯಿಸಿದರು.

ಈ ಸಂದರ್ಭ ತೂಕ್ ಬೊಳಕ್ ಪ್ರಕಾಶಕ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ ಹಾಗೂ ಬೇಬಿ ಚೋಂದಮ್ಮ, ಶಿವಮ್ಮ ವೈಲೇಶ್ ಹಾಗೂ ಕಾವ್ಯ ಹಾಜರಿದ್ದರು.

- ಎನ್.ಎನ್. ದಿನೇಶ್