ಸೋಮವಾರಪೇಟೆ, ಮೇ 30: ‘ನಿಮ್ಮ ಮೊಬೈಲ್ ನಂಬರ್‍ಗೆ ಅಷ್ಟು ಕೋಟಿ ಬಂದಿದೆ;ಇಷ್ಟು ಕೋಟಿ ಬಂದಿದೆ, ನಿಮಗೆ ಬಂಪರ್ ಬಹುಮಾನ ಬಂದಿದೆ, ಗಿಫ್ಟ್ ಬಂದಿದೆ’ ಎಂದೆಲ್ಲಾ ಕರೆ ಮಾಡಿ ಸಾವಿರಾರು ರೂಪಾಯಿಗಳನ್ನು ಎಗರಿಸುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ.

ಈ ಮಧ್ಯೆ ‘ನಿಮ್ಮ ಎಟಿಎಂ ಸರಿಯಿಲ್ಲ; ಪಿನ್ ನಂಬರ್ ಹೇಳಿದರೆ ಸರಿ ಮಾಡುತ್ತೇವೆ’ ಎಂದು ಖಾತೆಯಿಂದಲೇ ಹಣ ಎಗರಿಸಿದ ಅದೆಷ್ಟೋ ಪ್ರಕರಣ ವರದಿಯಾಗಿದೆ. ಅಂಚೆ ಮೂಲಕ ಸೋಪ್, ಸೀಗೇಕಾಯಿ ಪುಡಿ ಕಳುಹಿಸಿ ಸಾವಿರಾರು ಹಣ ಲಪಟಾಯಿಸಿದ ಬಗ್ಗೆಯೂ ಸಾಕ್ಷಿಗಳಿವೆ. ಇವುಗಳ ಸಾಲಿಗೆ ಇದೀಗ ಆನ್‍ಲೈನ್ ಶಾಪಿಂಗ್ ವ್ಯವಹಾರ ಸೇರಿಕೊಂಡಿದೆ.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದ ಸತೀಶ್ ಅವರು ತಮ್ಮ ಮೊಬೈಲ್‍ನಿಂದ ಸ್ನ್ಯಾಪ್‍ಡೀಲ್‍ನಲ್ಲಿ ಶೂ ಬುಕ್ ಮಾಡಿದ್ದು, ತಾ. 24 ರಂದು ಶೂ ಬಂದಿದೆ. ಇದಾದ ಎರಡು ದಿನದಲ್ಲಿ ಸತೀಶ್ ಅವರ ಮೊಬೈಲ್‍ಗೆ ಕರೆಯೊಂದು ಬಂದಿದ್ದು, ನಿಮಗೆ 12 ಲಕ್ಷದ ಕಾರು ಬಂಪರ್ ಬಹುಮಾನವಾಗಿ ಬಂದಿದ್ದು, ನೀವು ನಮ್ಮ ಲಕ್ಕಿ ಗ್ರಾಹಕರಾಗಿದ್ದೀರಿ ಎಂದು ಹೊಗಳಿದ್ದಾರೆ.

ಕಾರನ್ನು ತಮ್ಮ ಹೆಸರಿಗೆ ನೋಂದಾಯಿಸಲು 3,500 ರೂಪಾಯಿಗಳನ್ನು ಸ್ನ್ಯಾಪ್‍ಡೀಲ್‍ಗೆ ಕಟ್ಟಬೇಕು ಎಂದು ನಿತಿನ್‍ಕುಮಾರ್ ಸಿಂಗ್ ಹೆಸರಿನಲ್ಲಿರುವ ದಾಖಲೆಗಳನ್ನು ವಾಟ್ಸಾಪ್‍ನಲ್ಲಿ ಕಳುಹಿಸಿದ್ದಾರೆ. ಈ ಬಗ್ಗೆ ಸ್ನ್ಯಾಪ್‍ಡೀಲ್‍ನ ಅಧಿಕೃತ ವೆಬ್‍ಸೈಟ್‍ನಲ್ಲಿರುವ ಸಂಖ್ಯೆಗೆ ಕರೆ ಮಾಡಿದರೆ ಅಂತಹ ಸ್ಕೀಮ್‍ಗಳಾವುವೂ ನಮ್ಮಲ್ಲಿ ಇಲ್ಲ ಎಂದಿದ್ದಾರೆ. ಇತ್ತ ನಿತಿನ್‍ಕುಮಾರ್ ಸಿಂಗ್‍ನ ಮೊಬೈಲ್‍ಗೆ ಕರೆ ಮಾಡಿ ನಿಮ್ಮ ಮೇಲೆ ಪೊಲೀಸ್ ದೂರು ನೀಡುತ್ತೇವೆ ಎಂದಾಕ್ಷಣ ಕರೆ ಸ್ಥಗಿತಗೊಂಡು ಮೊಬೈಲ್ ಸ್ವಿಚ್‍ಆಫ್ ಆಗಿದೆ.

ನ್ಯಾಪ್‍ಟೊಲ್‍ನದ್ದು ಮತ್ತೊಂದು : ಇದರೊಂದಿಗೆ ಐಗೂರು ಗ್ರಾಮದ ಸುಬ್ರಮಣಿ ಅವರಿಗೆ ನ್ಯಾಪ್‍ಟೊಲ್ ಹೆಸರಿನಲ್ಲಿ ಅಂಚೆ ಮೂಲಕ ಪತ್ರ ಬಂದಿದ್ದು, ನ್ಯಾಪ್‍ಟೊಲ್‍ನ 11ನೇ ವರ್ಷಾಚರಣೆ ಪ್ರಯುಕ್ತ ನಿಮಗೆ ಎಕ್ಸ್‍ಯುವಿ ಕಾರ್ ಬಂಪರ್ ಬಹುಮಾನವಾಗಿ ಬಂದಿದೆ. ನೀವು ನೋಂದಣಿ ಶುಲ್ಕವಾಗಿ ತಕ್ಷಣ 25,600 ಹಣವನ್ನು ನಮ್ಮ ಅಕೌಂಟ್‍ಗೆ ಕಟ್ಟಬೇಕು. ಇದರೊಂದಿಗೆ 14,80,000ಮೌಲ್ಯದ ಕಾರಿಗೆ ಸರ್ಕಾರದ ನಿಯಮದನ್ವಯ ಶೇ.1ರಷ್ಟು (14,800) ಹಣವನ್ನು ನೀಡಿ ನಿಮ್ಮ ಬಹುಮಾನ ಪಡೆದುಕೊಳ್ಳಬಹುದು ಎಂದು ನಮೂದಿಸಿತ್ತು.

ಈ ಬಗ್ಗೆ ಸುಬ್ರಮಣಿ ಅವರು ತಮ್ಮ ಸ್ನೇಹಿತರೊಂದಿಗೆ ತಿಳಿಸಿದ್ದು, ಕಾಜೂರಿನ ಅವಿಲಾಷ್ ಅವರು ನ್ಯಾಪ್‍ಟೊಲ್‍ನ ಗ್ರಾಹಕರ ಮಾಹಿತಿ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದಾಗ ನಮ್ಮಲ್ಲಿ ಅಂತಹ ಸ್ಕೀಮ್‍ಗಳಿಲ್ಲ, ಗ್ರಾಹಕರು ಮೋಸದ ಜಾಲಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಮೋಸದ ಜಾಲಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಗ್ರಾಹಕರಿಗೆ ಪಂಗನಾಮ ಹಾಕುತ್ತಲೇ ಇವೆ. ಹಲವಷ್ಟು ಮಂದಿ ಬಹುಮಾನದ ಆಸೆಗೆ ಬಲಿಬಿದ್ದು ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಈ ಎರಡು ಪ್ರಕರಣಗಳಲ್ಲಿ ಮಾತ್ರ ವಿವೇಚನೆಯಿಂದ ವಿಚಾರಿಸಿದ್ದಕ್ಕೆ ಸಾವಿರಾರು ರೂಪಾಯಿ ಪಂಗನಾಮ ಹಾಕಿಕೊಳ್ಳುವದು ತಪ್ಪಿದಂತಾಗಿದೆ. ‘ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ’-ಗ್ರಾಹಕರು ಇಂತಹ ಮೋಸದ ಜಾಲಗಳ ಬಗ್ಗೆ ಜಾಗ್ರತರಾಗಿರಬೇಕಷ್ಟೆ.

- ವಿಜಯ್ ಹಾನಗಲ್