ಮಡಿಕೇರಿ, ಮೇ 30: ಲಕ್ಷಾಂತರ ಕೇಳುಗರ ಮನಗೆದ್ದಿರುವ ಮಡಿಕೇರಿ ಆಕಾಶವಾಣಿಯ ಅತಿ ಎತ್ತರದ ‘ಟವರ್’ ಕುಸಿಯುವ ಹಂತದಲ್ಲಿದ್ದರೂ ಆಕಾಶವಾಣಿ ನಿಲಯದ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆಂದು ಸುತ್ತಮುತ್ತಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಆಕಾಶವಾಣಿಯ ‘ಟವರ್’ನ ಅಡಿಪಾಯದ ಒತ್ತಿನಲ್ಲಿರುವ ಕಾಂಪೌಂಡ್ ಸಹಿತ ಭೂಕುಸಿತ ಕಳೆದ ವರ್ಷದ ಭಾರೀ ಮಳೆಗಾಲದಲ್ಲಿ ಸಂಭವಿಸಿತ್ತು. ಈ ಟವರ್ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಕುಸಿಯಬಹುದಾಗಿದ್ದರಿಂದ ಅದನ್ನು ತಡೆಗಟ್ಟುವ ಬದಲು ಆಕಾಶವಾಣಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲು ಮುಂದಾಗಿರುವದರ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದೆ.

ಆಕಾಶವಾಣಿ ನಿಲಯದ ‘ಟವರ್’ನ ಬುಡ ಭಾಗದಲ್ಲಿ ಭೂಕುಸಿತಗೊಂಡಿದ್ದರೂ ಇನ್ನೂ ಎಚ್ಚೆತ್ತುಕೊಳ್ಳದ್ದರಿಂದ ಈ ವರ್ಷದ ಮಳೆಗಾಲದಲ್ಲಿ ‘ಟವರ್’ ಕುಸಿದು ಸುತ್ತಮುತ್ತಲ ಮನೆಗಳ ಮೇಲೆ ಮತ್ತು ರಸ್ತೆಗಳ ಮೇಲೆ ಅತಿ ಎತ್ತರದ ಈ ಟವರ್ ಕುಸಿದು ಬೀಳಬಹುದಾಗಿದ್ದರೂ ಇನ್ನೂ ಆಕಾಶವಾಣಿ ನಿಲಯದ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಇದರಿಂದ ಆತಂಕಗೊಂಡಿರುವ ಸುತ್ತಮುತ್ತಲಿನ ನಿವಾಸಿಗಳು ಆಕಾಶವಾಣಿ ನಿಲಯದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

1993 ರಲ್ಲಿ ಮಡಿಕೇರಿಯ ರಾಜಾಸೀಟ್ ಬಳಿಯ ಎತ್ತರದ ಗುಡ್ಡದ ಮೇಲೆ ನಿರ್ಮಾಣಗೊಂಡ ಈ ಆಕಾಶವಾಣಿ ನಿಲಯದ ಸುಮಾರು 100 ಮೀಟರ್‍ನಷ್ಟು ಎತ್ತರದ ಈ ಟವರ್ 103.1 ಕಂಪನಾಂಕ ಮೆಘಾಹಟ್ಸ್ ಸ್ವೀಕೆನ್ಸಿಯ ಸಾಮಥ್ರ್ಯವನ್ನು ಹೊಂದಿ ಕೊಡಗು ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಡಿಕೇರಿ ಆಕಾಶವಾಣಿಯ ಪ್ರಸಾರ ವ್ಯಾಪಿಸಿ ಸಹಸ್ರಾರು ಸಂಖ್ಯೆಯ ಕೇಳುಗರನ್ನು ಸಂಪಾದಿಸಿದ ಕೀರ್ತಿ ಇದೆ. ಹುಣಸೂರು ತಾಲೂಕಿನ ಕೆಲ ವ್ಯಾಪ್ತಿಯಲ್ಲೂ ಮಡಿಕೇರಿ ಆಕಾಶವಾಣಿ ನಿಲಯದ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿದೆ. ಇದರೊಂದಿಗೆ ಕೊಡಗಿನ ಪಕ್ಕದ ಹೊರ ರಾಜ್ಯವಾದ ಕಾಸರಗೋಡಿಗೂ ತನ್ನ ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿ ಅತಿ ಹೆಚ್ಚಿನ ಅಭಿಮಾನಿ ಹಾಗೂ ಕೇಳುಗರನ್ನು ಹೊಂದಿರುವದು ವಿಶೇಷ.

ಚಂದನ ವಾಹಿನಿಯ ಟವರ್

ಮಡಿಕೇರಿ ‘ದೂರದರ್ಶನ’ದ ಮರು ಪ್ರಸಾರಕ್ಕೆ ಅನುಕೂಲವಾಗಲೆಂದು ಸುಮಾರು 10 ಮೀಟರ್ ಹೆಚ್ಚುವರಿ ‘ಟವರ’ನ್ನು ಕೂಡ ಇದೇ ಟವರ್‍ನಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಅಂದಾಜು ಒಟ್ಟು 110 ಮೀಟರ್‍ನ್ನು ಈ ಟವರ್ ಹೊಂದಿದೆ. ಇಷ್ಟೊಂದು ಪ್ರಖ್ಯಾತಿ ಪಡೆದ ಮಡಿಕೇರಿ ಆಕಾಶವಾಣಿ ನಿಲಯದ ಒತ್ತಿನಲ್ಲಿ ನಿರ್ಮಾಣಗೊಂಡ ಅತೀ ಎತ್ತರದ ‘ಟವರ್’ನ ಅಡಿಪಾಯಕ್ಕೆ ಅತಿ ಸಮೀಪಭೂಕುಸಿತಗೊಂಡು ನಿಲಯದ ಕಾಂಪೌಂಡ್ ಕುಸಿದು ಕೆಳಗಿನ ರಸ್ತೆಗೆ ಮಣ್ಣಿನ ರಾಶಿ ಬಿದ್ದಿತ್ತು.

ಸುಮಾರು ಹತ್ತು ತಿಂಗಳುಗಳೇ ಉರುಳಿದರೂ ಮಡಿಕೇರಿ ಆಕಾಶವಾಣಿ ನಿಲಯದ ನಿರ್ದೇಶಕರು ಅಥವಾ ಇಡೀ ನಿಲಯದ ನಿರ್ವಹಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ಸ್ಪಂದಿಸದಿರುವದು ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನಿಷ್ಟ ಜವಾಬ್ದಾರಿ ಎಂಬಂತೆ ಕಾಂಪೌಂಡ್‍ನ ಮಣ್ಣು ರಸ್ತೆಗೆ ಬಿದ್ದಿರುವದನ್ನು ಕೂಡ ತೆರವುಗೊಳಿಸಿ ಚರಂಡಿ ನೀರು ಹರಿದು ಹೋಗಲು ಅವಕಾಶ ಮಾಡಿಕೊಡದಿರುವದು ನಿರ್ಲಕ್ಷ್ಯವಾಗಿದೆ.

ಆಕಾಶವಾಣಿ ರಸ್ತೆಗಾಗಿ ವಾಯು ವಿಹಾರ ತೆರಳುತ್ತಿರುವ ಮಾಜಿ ಸಚಿವ ಯಂ.ಸಿ.ನಾಣಯ್ಯ ಅವರು ಭೂಕುಸಿತ ಮತ್ತು ಮಣ್ಣು ರಸ್ತೆಗೆ ಬಿದ್ದುದನ್ನು ನೋಡಿದ ಅವರು ನೇರವಾಗಿ ಆಕಾಶವಾಣಿ ನಿಲಯಕ್ಕೆ ತೆರಳಿ ಅಲ್ಲಿದ್ದ ಚಿರಪರಿಚಿತ ಅಧಿಕಾರಿಗಳೊಂದಿಗೆ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥರೊಂದಿಗೆ ಪ್ರಸ್ತಾಪಿಸಿ ‘ಇಷ್ಟು ಸಮಯವಾದರೂ ನಿಮ್ಮ ಸಂಸ್ಥೆ ಕಾಂಪೌಂಡ್ ಕುಸಿದುದನ್ನು ಮತ್ತು ಮಣ್ಣು ರಸ್ತೆಗೆ ಬಿದ್ದುದನ್ನು ತೆರವುಗೊಳಿಸದ ಬಗ್ಗೆ ಪ್ರಶ್ನಿಸಿದರಲ್ಲದೆ, ಕೂಡಲೇ ಇದರ ಫೋಟೋ ತೆಗೆದು ವಿವರವುಳ್ಳ ಪತ್ರವನ್ನು ತಮ್ಮ ಮೇಲಧಿಕಾರಿಗೆ ಬರೆದು ಕ್ರಮ ವಹಿಸುವಂತೆ ಸೂಚಿಸಿದಾಗ ತಾಂತ್ರಿಕ ವಿಭಾಗದ ಮುಖ್ಯಸ್ಥರು ಸ್ಪಂದನ ನೀಡಲಿಲ್ಲ. ಇದು ನಗರಸಭೆಗೆ ಒಳಪಡದ್ದರಿಂದ ಕ್ರಮಕ್ಕೆ ಸೂಚಿಸಲು ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದರಲ್ಲದೆ, ಈ ಕಾಂಪೌಂಡ್ ಆಕಾಶವಾಣಿಗೆ ಸೇರಿದ್ದರಿಂದ ಮಣ್ಣನ್ನು ತಾವೇ ತೆರವುಗೊಳಿಸುವಂತೆ ಸೂಚಿಸಿದರೂ ಸ್ಪಂದಿಸದ ತಾಂತ್ರಿಕ ವಿಭಾಗದವರು ಬೇಜವಬ್ದಾರಿಯನ್ನು ತೋರಿದ್ದಾರೆ.

ಮತ್ತೆ ಮಳೆಗಾಲ ಸನ್ನಿಹಿತಗೊಳ್ಳುತ್ತಿದೆ. ಆದರೂ, ಈ ಭೂಕುಸಿತದ ಮಣ್ಣನ್ನು ತೆರವುಗೊಳಿಸುವ ಗೋಜಿಗೆ ನಿಲಯದ ಜವಾಬ್ದಾರಿಯುತ ಅಧಿಕಾರಿಗಳು ಮನಸ್ಸು ಮಾಡಲಿಲ್ಲ. ಈ ಮಳೆಗಾಲದಲ್ಲಿ ಮತ್ತೆ ಇದೇ ಸ್ಥಳದಲ್ಲಿ ಭೂಕುಸಿತವುಂಟಾಗಿ 100 ಮೀಟರ್ ಎತ್ತರದ ‘ಟವರ್’ ಕುಸಿಯಬಹುದು ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಹಾಗೇನಾದರೂ ಘಟನೆ ಸಂಭವಿಸಿದಲ್ಲಿ ಟವರ್ ಬಿದ್ದಲ್ಲಿ ರಾಜಾಸೀಟಿಗಾಗಿ ವಾರ್ತಾ ಭವನದತ್ತ ತೆರಳುವ ರಸ್ತೆ, ಅದರ ಕೆಳಗಿನ ಮಾಜಿ ಸಚಿವ ಯಂ.ಸಿ.ನಾಣಯ್ಯ ಅವರ ನಿವಾಸದತ್ತ ತೆರಳುವ ಹಾಗೂ ಅದರ ಕೆಳಗಿನ ರೇಸ್ ಕೋರ್ಸ್ ರಸ್ತೆಗಳಿಗೆ ಮತ್ತು ಹಲವಷ್ಟು ಮನೆಗಳಿಗೆ ಪ್ರಾಣ ಹಾನಿಯುಂಟಾಗಬಹುದು. ಮುಖ್ಯವಾಗಿ ಈ ರಸ್ತೆಗಳಲ್ಲಿ ತೆರಳುವ ವಾಹನಗಳಿಗೆ ತೀವ್ರ ತರದ ಹಾನಿಯುಂಟಾಗಲಿದೆಯಲ್ಲದೆ, ಪ್ರಾಣ ಅಪಾಯ ಸಂಭವಿಸಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. - ಶ್ರೀವತ್ಸ