ಕೂಡಿಗೆ, ಮೇ 30: ಕೂಡಮಂಗಳೂರು ಜಲಾಶಯಕ್ಕೆ ತೆರಳುವ ಪ್ರಮುಖ ರಸ್ತೆಯಾದ ಹಾರಂಗಿ-ಬಸವನತ್ತೂರು ರಸ್ತೆ ದುರಸ್ತಿ ಕಾರ್ಯಕ್ಕೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ರಸ್ತೆಯು ಬಸವನತ್ತೂರು ಗ್ರಾಮದ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಹಾರಂಗಿ ರಸ್ತೆಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡುವ ನೆಪದಲ್ಲಿ ಮಣ್ಣನ್ನು ರಸ್ತೆಗೆ ಹಾಕಿದ್ದು, ಅತಿಯಾದ ಮಳೆಯಿಂದ ರಸ್ತೆ ಕೆಸರುಮಯವಾಗಿದೆ.
ಐದಾರು ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದೇ ರಸ್ತೆ ಮಾರ್ಗವಾಗಿ ತೆರಳಬೇಕಾಗಿದ್ದು, ಕೆಸರಿನಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಕೂಡಮಂಗಳೂರು ಗ್ರಾ.ಪಂ ಇದರ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಬಸವನತ್ತೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.