ಸುಂಟಿಕೊಪ್ಪ, ಮೇ 30: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು - ಯಡವಾರೆ ರಸ್ತೆ ನಿರ್ವಹಣೆ ಇಲ್ಲದೆ ದಶಕಗಳಿಂದ ತೀರಾ ಹಾಳಾಗಿದ್ದು, ಕಳೆದ ವರ್ಷದ ಮೇಘಾ ಮಳೆಗೆ ಮತ್ತಷ್ಟು ಹದಗೆಟ್ಟಿತ್ತು ಇದೀಗ ಮಳೆ ಪರಿಹಾರ ನಿಧಿಯಿಂದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ.
ಚರಂಡಿ ಇಲ್ಲದೆ ಆಗಾಗ್ಗೆ ಗುಂಡಿ ಮುಚ್ಚಿ ತೇಪೆ ಹಾಕುತ್ತಿದ್ದ ರಸ್ತೆಯನ್ನು ಅಗಲೀಕರಿಸಲು ತೋಟ ಹಾಗೂ ಗದ್ದೆ ಮಾಲೀಕರು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟ ಪರಿಣಾಮ ಚರಂಡಿ ನಿರ್ಮಿಸಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಹಾಸನ ಜಿಲ್ಲೆಯ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.
ಮುಂಗಾರು ಮಳೆ ಆರಂಭವಾಗುವ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಒಳಿತಾಗುತ್ತದೆ. ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ವಾಹನ ಚಾಲಕರುಗಳಿಗೆ ಈ ರಸ್ತೆಯಲ್ಲಿ ತಿರುಗಾಡಲು ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದು ಆದಷ್ಟು ಬೇಗ ಅಚ್ಚುಕಟ್ಟಾಗಿ ರಸ್ತೆ ಕೆಲಸ ಪೂರ್ಣಗೊಳ್ಳಲಿ ಎಂದು ಆಶಿಸಿದ್ದಾರೆ.