ಮಡಿಕೇರಿ, ಮೇ 28: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಯುವತಿ ಕೆರೆಗೆ ಹಾರಿ ಇಹಲೋಕ ತ್ಯಜಿಸಿರುವ ಅಪ್ರಾಪ್ತ ವಯಸ್ಸಿನ ಯುವತಿಯಾಗಿದ್ದಾಳೆ.

ಕಳೆದ ವಾರ ಕಾಲೇಜು ಪುನರಾರಂಭಗೊಂಡಿದ್ದು, ಶನಿವಾರ ತರಗತಿಗೆ ಹೋಗಿ ಬಂದಿದ್ದಾಳೆ. ಯುವಕನೋರ್ವನನ್ನು ಪ್ರೀತಿಸುತ್ತಿದ್ದ ಈಕೆ ಪ್ರೇಮ ಪ್ರಕರಣದಿಂದ ಸಂಕಷ್ಟಕ್ಕೊಳಗಾಗಿದ್ದಳು ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ಯುವತಿ ತಾ. 27 ರಂದು ಮನೆಯಿಂದ ಕಾಣೆಯಾಗಿದ್ದಳು. ಕಂಗಾಲಾದ ಮನೆಯವರು ಮತ್ತು ಸ್ಥಳೀಯರು ಸುತ್ತಮುತ್ತಲಿನಲ್ಲಿ ಹುಡುಕಾಡಿದಾಗ ಮನೆಯಿಂದ ಅನತಿ ದೂರದಲ್ಲಿರುವ ಕಾಫಿ ತೋಟದ ಕೆರೆಯಲ್ಲಿ ಪಾದರಕ್ಷೆ ತೇಲುತ್ತಿದ್ದುದು ಕಂಡುಬಂದಿದೆ. ಹಾಗೆಯೇ ಕೆರೆಯಲ್ಲಿ ಶೋಧಿಸಿದಾಗ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಮೃತ ದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿರುವದು ಕಂಡುಬಂದಿದೆ. ತನ್ನ ಸಾವಿಗೆ ಕಾರಣರಾದ ಯುವಕರಿಬ್ಬರ ಹೆಸರನ್ನು ಡೆತ್ ನೋಟ್‍ನಲ್ಲಿ ಬರೆದಿದ್ದಾಳೆ ಎಂದು ಹೇಳಲಾಗಿದೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎಂದು ಹೇಳಲಾಗಿರುವ 7ನೇ ಹೊಸಕೋಟೆಯ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.