ಬೆಂಗಳೂರು, ಮೇ 27: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 7 ಸಚಿವರಿಂದ ರಾಜೀನಾಮೆ ಕೊಡಿಸಿ ಸಂಪುಟ ಪುನರಚನೆ ಮಾಡಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಂತ್ರ ರೂಪಿಸುತ್ತಿದ್ದಾರೆ.ಪ್ರಸಕ್ತ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿ ಇವೆ. ಸಿಎಂ ಸೇರಿದಂತೆ ಒಟ್ಟು 34 ಮಂದಿ ಸಂಪುಟದಲ್ಲಿ ಇರುವ ಅವಕಾಶವಿದೆ. ಹೀಗಾಗಿ ಖಾಲಿ 3ಸ್ಥಾನಗಳ ಜೊತೆಗೆ ಏಳು ಮಂದಿ ಸಚಿವರ ರಾಜೀನಾಮೆ ಕೊಡಿಸಿ ಒಟ್ಟು ಹತ್ತು ಮಂದಿಯನ್ನು ಸಂಪುಟದಲ್ಲಿ ಸೇರ್ಪಡೆ ಮಾಡಲು ಮೈತ್ರಿ ಸರ್ಕಾರದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಮೈತ್ರಿ ಪಕ್ಷದ 10 ಅಸಮಾಧಾನ ಶಾಸಕರಿಗೆ ಸಚಿವ ಸ್ಥಾನ ನೀಡಿ ಸರಕಾರ ಉಳಿಸಿಕೊಳ್ಳುವದು ಸಿಎಂ ಹಾಗೂ ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ.ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ಜಮೀರ್ ಅಹ್ಮದ್, ಜಯಮಾಲಾ, ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವರನ್ನು ಕೈಬಿಡಲು ಕೈ ಪಕ್ಷ ಚಿಂತನೆ ನಡೆಸಿದೆ.

ಅದೇ ರೀತಿ ಜೆಡಿಎಸ್‍ನಲ್ಲಿ ಸಾ.ರಾ. ಮಹೇಶ್, ಎಸ್.ಆರ್. ಶ್ರೀನಿವಾಸ್, ಎಂ.ಸಿ. ಮನಗೂಳಿ ಅವರುಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಅಥವಾ ಈ ವಾರದ ಅಂತ್ಯದಲ್ಲಿ ಸಂಪುಟ ಪುನರಚನೆ ಮಾಡಲು ಸರ್ಕಾರದ ಮುಖಂಡರು ನಿರ್ಧರಿಸಿದ್ದಾರೆ.