ಮಡಿಕೇರಿ, ಮೇ 27: ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭ ಗೊಳ್ಳಲಿದೆ. ತಾ. 29 ರಿಂದ ಶಾಲೆ ಪುನರಾರಂಭಗೊಳ್ಳಲಿದ್ದು, ಶಿಕ್ಷಕರು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿ ಕೊಳ್ಳುತ್ತಿದ್ದರೆ, ಇತ್ತ ಮಕ್ಕಳು ಶಾಲೆಗೆ ಮರಳಲು ತಯಾರಿಯಲ್ಲಿದ್ದಾರೆ.ಈಗಾಗಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳು ತಾ. 29 ರಿಂದ ಆರಂಭಗೊಳ್ಳಲಿದೆ. ರಜೆಯ ಮಜದಲ್ಲಿದ್ದ ಮಕ್ಕಳು ಪುಸ್ತಕಗಳಿಗೆ ರಟ್ಟು ಹಾಕಿ, ಬ್ಯಾಗ್ಗಳು, ಸಮವಸ್ತ್ರ ಗಳೊಂದಿಗೆ ತಯಾರಾಗಿದ್ದಾರೆ. ಶಿಕ್ಷಕರು ತಾ. 28 ರಂದೇ (ಇಂದು) ಶಾಲೆಗಳಿಗೆ ತೆರಳಬೇಕಿದ್ದು, ಪಠ್ಯ ಚಟುವಟಿಕೆಗಳತ್ತ ತಯಾರಿ ಮಾಡಿಕೊಳ್ಳಬೇಕಿದೆ.
ತಾ. 29 ರಂದು ಶಾಲಾ ಪ್ರಾರಂಭೋತ್ಸವ ದೊಂದಿಗೆ ಶಾಲೆ ತೆರೆದುಕೊಳ್ಳಲಿದೆ. ಶಾಲೆಗಳನ್ನು ತಳಿರು ತೋರಣ ಗಳಿಂದ ಸಿಂಗರಿಸಿ ಹಬ್ಬದ ರೀತಿಯಲ್ಲಿ ಪ್ರಾರಂಭಿಸಲಿದ್ದು, ಎಸ್ಡಿಎಂಸಿ ಯವರು, ಪೋಷಕರು, ಶಿಕ್ಷಕರು ತಯಾರಿ ಮಾಡಿಕೊಂಡಿದ್ದಾರೆ.