ಸುಂಟಿಕೊಪ್ಪ, ಮೆ 26: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ದಿ. ಡಿ. ಶಿವಪ್ಪ ಅವರ ಜ್ಞಾಪಕಾರ್ಥ 24ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಸೋಮವಾರ ನಡೆದ ಪಂದ್ಯದಲ್ಲಿ ಕುಂಬ್ಳೆ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ದಿನದ ಮೊದಲ ಪಂದ್ಯದಲ್ಲಿ ಮೋಗ್ರಲ್ ಬ್ರೋಸ್ ಎಫ್.ಸಿ. ಕುಂಬ್ಳೆ ತಂಡವು ವಿಜಯನಗರ ಎಫ್.ಸಿ. ಮೈಸೂರು ತಂಡವನ್ನು 5-3ಗೋಲುಗಳಿಂದ ಸೋಲಿಸಿತು.

ಪ್ರಾರಂಭದಿಂದಲೂ 2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿದ್ದವು. ಹಲವಾರು ವರ್ಷಗಳಿಂದ ಮೈದಾನದ ಪರಿಚಯವಿರುವ ಕುಂಬ್ಳೆ ತಂಡವು ಕೂಡ ತನ್ನದೇ ಆದ ಆಟವನ್ನು ಪ್ರದರ್ಶಿಸುವ ಮೂಲಕ ಜನಮನ್ನಣೆ ಪಡೆದುಕೊಂಡಿತು. ಪಂದ್ಯದ 25ನೇ ನಿಮಿಷದಲ್ಲಿ ಸಿಕ್ಕಿದ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡ ಮೈಸೂರು ತಂಡದ ಮುನ್ನಡೆ ಆಟಗಾರ ಪ್ರವೀಣ್ ಒಂದು ಗೋಲು ಹೊಡೆಯುವದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ ದ್ವಿತೀಯಾರ್ಧದಲ್ಲಿ ಶಿಸ್ತಿನ ಆಟದ ಪ್ರದರ್ಶನ ನೀಡಲು ಆರಂಭಿಸಿದ ಕುಂಬ್ಳೆ ತಂಡ ಚೆಂಡಿನ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸುವದರ ಮೂಲಕ 3ನೇ ನಿಮಿಷದಲ್ಲಿ ಶರಿ ಹೊಡೆದ ಒಂದು ಗೋಲು ಸಮಬಲವನ್ನು ಕಂಡುಕೊಂಡಿತು. ಕೊನೆಯಲ್ಲಿ ಯಾವದೇ ಫಲಿತಾಂಶ ದೊರೆಯದ ಹಿನ್ನೆಲೆ ಅಂಪೈರ್ ಟೈ ಬ್ರೇಕರ್ ತೀರ್ಪು ನೀಡಿದರು.

ಕೊನೆಯಲ್ಲಿ ಕುಂಬ್ಳೆ ತಂಡವು 5-3 ಗೋಲುಗಳಿಂದ ಜಯಗಳಿಸಿತು. ಎರಡನೇ ಪಂದ್ಯದಲ್ಲಿ ಹೋರಿಜನ್ ಎಫ್.ಸಿ. ಬೆಂಗಳೂರು ಹೊಯ್ಸಳ ಎಫ್.ಸಿ. ಹಾಸನ ಈ 2 ತಂಡಗಳು ಮೈದಾನಕ್ಕೆ ಆಗಮಿಸದೇ ಇದ್ದುದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.