ವೀರಾಜಪೇಟೆ, ಮೇ 27: ವೀರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ವಾರ್ಷಿಕ ಕ್ರೀಡಾ ಕೂಟದ ಅಂಗವಾಗಿ ಆಯೋಜಿಸಿದ್ದ ಅಂತಿಮ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿಯ ರಾಯಲ್ ತಂಡ ಅಮ್ಮತ್ತಿಯ ಬಿಲ್ಲವ ವಾರಿಯರ್ಸ್ ತಂಡವನ್ನು ಮಣಿಸಿ, ಗೆಲವು ಸಾಧಿಸಿ ಟ್ರೋಫಿ ಹಾಗೂ ನಗದು ರೂ 17,777ನ್ನು ತನ್ನದಾಗಿಸಿಕೊಂಡಿತು.
ಬಿಲ್ಲವ ವಾರಿಯರ್ಸ್ ತಂಡ ರನ್ನರ್ಸ್ ಕಪ್, ರೂ 9,999 ನಗದನ್ನು ಪಡೆಯಿತು. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಒಟ್ಟು 20ತಂಡಗಳು ಭಾಗವಹಿಸಿದ್ದವು.
ಬಿಲ್ಲವ ಸೇವಾ ಸಂಘದಿಂದ ಬಿಟ್ಟಂಗಾಲ ಗ್ರಾಮದ ಅಂಬಟ್ಟಿಯ ಸಂಘದ ಆವರಣದಲ್ಲಿ ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ಸೌಹಾರ್ದದ ಸಂಕೇತ: ಸುನಿಲ್
ಮನುಷ್ಯ ಹುಟ್ಟುವದು ಆಕಸ್ಮಿಕ, ನಂತರ ಜಾತಿ ಜನಾಂಗ ಹುಟ್ಟಿಕೊಳ್ಳುತ್ತವೆ. ಸಮುದಾಯಗಳು ಆಯೋಜಿಸುವ ಕ್ರೀಡಾಕೂಟದಿಂದ ಸಮುದಾಯದ ಪ್ರತಿಯೊಬ್ಬರಲ್ಲಿ ಪ್ರೀತಿ ವಿಶ್ವಾಸ, ಪರಸ್ಪರ ಸಹಕಾರ ಸಾಮರಸ್ಯ ಜೀವನವನ್ನು ಕಾಣಬಹುದು. ಇದರಿಂದ ಸಮುದಾಯದ ಪ್ರಗತಿ ಏಳಿಗೆಯೊಂದಿಗೆ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಸಮುದಾಯಗಳು ಆಯೋಜಿಸುವ ಕ್ರೀಡಾ ಕೂಟಗಳಿಂದ ಒಮ್ಮತವನ್ನು ಸಾಧಿಸಬಹುದು ಎಂದು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ ಮಾತನಾಡಿ ಸಮುದಾಯದ ಕುಟುಂಬಗಳನ್ನು ಒಂದುಗೂಡಿಸಲು ಇಂತಹ ಕ್ರೀಡಾಕೂಟ ಸಹಕಾರಿಯಗಲಿದೆ ಎಂದರು.
ಸಭೆಯನ್ನುದ್ದೇಶಿಸಿ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಆನಂದ್, ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಡಿ.ಮುಕುಂದ್, ಡಾ:ಬಿ.ಎಸ್.ನಿರ್ಮಲ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್ ಮಾತನಾಡಿ ಸಮುದಾಯದ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಬಿಲ್ಲವ ಸೇವಾ ಸಂಘಟನೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಮುದಾಯದ ಎಲ್ಲ ಬಾಂಧವರು ಆಡಳಿತ ಮಂಡಳಿಯೊಂದಿಗೆ ಎಲ್ಲ ರೀತಿಯಲ್ಲಿಯೂ ಕೈಜೋಡಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಚಂಚಾಯಿತಿ ಅಧ್ಯಕ್ಷ ಸಾಬಾ ನಂಜಪ್ಪ, ಸದಸ್ಯ ಬಿ.ಆರ್.ದಿನೇಶ್, ಬಿ.ಎಸ್.ಪುಷ್ಪ ಸುಂದರ್, ಕುಶಾಲನಗರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಚ್.ಬಿ.ರಮೇಶ್, ಸುಂಟಿಕೊಪ್ಪದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್, ಬಿಲ್ಲವ ಸೇವಾ ಸಂಘದ ಸೋಮವಾರ ತಾಲೂಕು ಅಧ್ಯಕ್ಷ ಬಿ.ಭಾಸ್ಕರ್. ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ ಸುಂದರ್, ಉದ್ಯಮಿ ಬಿ.ಆರ್. ಬೋಜಪ್ಪ ಪೂಜಾರಿ, ಬೆಂಗಳೂರಿನ ವೇಣುಗೋಪಾಲ್, ಕ್ರೀಡಾ ಸಮಿತಿ ಅಧ್ಯಕ್ಷ ಅಮ್ಮತ್ತಿಯ ರವೀಂದ್ರ, ಬಿ.ಜಿ.ಸಾಯಿನಾಥ್ ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ 26 ಮಂದಿ ಮಾಜಿ ಯೋಧರನ್ನು, ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಪ್ರತೀಕ್ಷಾ, ಬಿ.ಎಂ. ದೀನಾ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಟ್ಟಂಗಾಲದ ಡಾ: ಬಿ.ಎಸ್.ನಿರ್ಮಲ, ಹಿಂದಿನಿಂದಲೂ ಸಂಘದ ಏಳಿಗೆಗಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಬಿ.ಜೆ.ನಾಗಪ್ಪ, ಖಜಾಂಚಿ ಬಿ.ಕೆ.ರಾಮಣ್ಣ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ಆರ್.ರಾಜ, ಉಪಾಧ್ಯಕ್ಷ ಬಿ.ಎಸ್.ಪುರುಷೋತ್ತಮ್, ಕಾರ್ಯದರ್ಶಿ ಬಿ.ಎಸ್.ಜನಾರ್ಧನ್ ಸಂಘದ ಇತರ ಪದಾಧಿಕಾರಿಗಳು ಹಾಜರಿದ್ದರು. ಖಜಾಂಚಿ ಬಿ.ಎಂ.ಸತೀಶ್ ನಿರೂಪಿಸಿದರು.