ಸೋಮವಾರಪೇಟೆ, ಮೇ 29: ಲೋಕಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಹೆಚ್ಚಿನ ಮುನ್ನಡೆ ಲಭಿಸಿರುವ ಹಿನ್ನೆಲೆ, ಬಿಜೆಪಿ ಕಾರ್ಯಕರ್ತರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಸನ್ಮಾನಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಾಚರಿಸಿದರು.
ಶಾಸಕರ ಕಚೇರಿಗೆ ಆಗಮಿಸಿದ ಅಪ್ಪಚ್ಚು ರಂಜನ್ ಅವರನ್ನು ಸನ್ಮಾನಿಸಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳಿಗೆ ಜನರು ಬೆಂಬಲ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಕ್ಷೇತ್ರದಾದ್ಯಂತ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲಪಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ ಎಂದರು. ಈಗಾಗಲೇ ಜಾರಿಗೆ ತಂದಿರುವ ಜನಪರ ಯೋಜನೆಗಳೊಂದಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಪ್ರತಿಯೋರ್ವ ಕಾರ್ಯಕರ್ತನೂ ಸಹ ಮನೆ ಮನೆಗಳಿಗೆ ತಲಪಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗೌಡಳ್ಳಿ ಸುನಿಲ್, ನಗರಾಧ್ಯಕ್ಷ ಸೋಮೇಶ್, ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಮಹಿಳಾ ಘಟಕದ ಸುಮಾ ಸುದೀಪ್, ಪ.ಪಂ. ಸದಸ್ಯರಾದ ನಳಿನಿ ಗಣೇಶ್, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಪ್ರಮುಖರಾದ ಪಿ.ಮಧು, ಸುಧಾಕರ್, ಇಂದ್ರೇಶ್, ಹುಲ್ಲೂರಿಕೊಪ್ಪ ಚಂದ್ರು, ಶರತ್‍ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.