ಗೋಣಿಕೊಪ್ಪಲು, ಮೇ 29: ಆದಿವಾಸಿಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಹಣವನ್ನು ಇಸ್ಪೀಟ್ ಆಡುವ ಮೂಲಕ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೆಕರ್ ಅವರಿಗೆ ಆದಿವಾಸಿಗಳು ಮನವಿ ಮಾಡಿದರು.

ಕಾರ್ಯನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ತಿತಿಮತಿಗೆ ಆಗಮಿಸಿದ ಸಂದರ್ಭ ಆದಿವಾಸಿ ಮುಖಂಡ ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರಾಗಿರುವ ಚುಬ್ರು ಅವರು ಈ ಬಗ್ಗೆ ಅಧಿಕಾರಿಗೆ ವಿವರಣೆ ನೀಡಿದರು.

ಆದಿವಾಸಿ ಜನಾಂಗವು ತಮ್ಮ ದುಡಿಮೆಯಲ್ಲಿ ಉಳಿಸಿದ ಹಣವನ್ನು ಕ್ರೋಡೀಕರಿಸಿ ತಮ್ಮ ಮಕ್ಕಳ ಮದುವೆ ಕಾರ್ಯವನ್ನು ನಡೆಸುತ್ತಾರೆ ಈ ಸಂದರ್ಭ ಅಂತಹ ಕಾರ್ಯಕ್ರಮ ಗಳನ್ನು ಗುರಿಯಾಗಿಸಿಕೊಂಡು ಬರುವ ಕೆಲವು ಆದಿವಾಸಿ ಯುವಕರು ವಿವಾಹದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ತಡರಾತ್ರಿಯ ವರೆಗೂ ಇಸ್ಪೀಟ್ ಆಡಿಕೊಂಡು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದರಿಂದ ಇವರ ಬದುಕು ದುಸ್ಥಿತಿಗೆ ಸಾಗಿದೆ.

ಈ ಬಗ್ಗೆ ಪೊಲೀಸರು ರಾತ್ರಿಯ ವೇಳೆಯಲ್ಲಿ ಬೀಟ್ ನಡೆಸಿ ಇಂತಹ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ದಾಳಿ ನಡೆಸಬೇಕೆಂದು ಮನವಿ ಮಾಡಿದರು.ಅಲ್ಲದೆ ವಾರಪೂರ್ತಿ ದುಡಿದ ಹಣವನ್ನು ವಾರದ ಕೊನೆಯಲ್ಲಿ ಆಯ್ದ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗಮನ ಸೆಳೆದರು. ಆದಿವಾಸಿ ಮುಖಂಡರುಗಳ ಮನವಿ ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವದಾಗಿ ಭರವಸೆ ನೀಡಿದರು.