ಮಡಿಕೇರಿ, ಮೇ 29: ರಾಷ್ಟ್ರೀಯ ಆರೋಗ್ಯ ಅಭಿಯಾನ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ಒಂದು “ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ತಾಲೂಕು” ಆಗಿ 2019ರ ತಾ. 31 ರೊಳಗೆ ಘೋಷಿಸಲು ಆದೇಶಿಸಲಾಗಿದೆ.
ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕನ್ನು ಆಯ್ಕೆಮಾಡಿಕೊಂಡಿದ್ದು, ಈ ತಾಲೂಕಿನಲ್ಲಿ ಕೋಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದು, ಆ ದಿಸೆಯಲ್ಲಿ ಇತ್ತೀಚೆಗೆ ಶನಿವಾರಸಂತೆಯಲ್ಲಿ ಕೋಟ್ಪಾ 2003 ರ ತನಿಖಾ ದಾಳಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ಸಂತೆ ಮಾರುಕಟ್ಟೆಯಲ್ಲಿ ಅಂಗಡಿಗಳು, ಹೋಟೆಲ್, ಪಾನ್ ಶಾಪ್, ಬಾರ್ ಅಂಡ್ ರೆಸ್ಟೊರೆಂಟ್ ಮತ್ತು ದಿನಸಿ ಅಂಗಡಿಗಳ ಮೇಲೆ ದಾಳಿ ಮಾಡಿ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಎಚ್ಚರಿಕೆ ಮತ್ತು ದಂಡವನ್ನು ವಿಧಿಸುವದರ ಮುಖಾಂತರ ಜನರಲ್ಲಿ ತಂಬಾಕು ಉತ್ಪನ್ನ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಪಾ ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು. ಈ ದಾಳಿಯಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ತಂಬಾಕು ನಿಯಂತ್ರಣ ತನಿಖಾ ದಳದ ಸದಸ್ಯರುಗಳು ಮತ್ತು ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಮಹೇಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಕುಮಾರಿ ಪುನೀತ ರಾಣಿ, ಸಮಾಜಕಾರ್ಯಕರ್ತರಾದ ಮಂಜುನಾಥ್ ಆರ್ ಮತ್ತು ಪೊಲೀಸ್ ಇಲಾಖೆ ಶನಿವಾರಸಂತೆ ಇವರುಗಳು ಭಾಗವಹಿಸಿದ್ದರು.