ಗೋಣಿಕೊಪ್ಪ ವರದಿ, ಮೇ 29: ಯವಕಪಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಗಡಿ ಗೇಟ್ ಮೂಲಕ ರೈತರ ಕೃಷಿ ಚಟುವಟಿಕೆಗೆ ತೆರಳಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಕೊಡಗು ರೈತ ಸಂಘದ ವತಿಯಿಂದ ಅರಣ್ಯ ಇಲಾಖೆಗೆ ಮನವಿ ನೀಡಲಾಯಿತು.

ವೀರಾಜಪೇಟೆ ಡಿಸಿಎಫ್ ಕಚೇರಿಯಲ್ಲಿ ಎಸಿಎಫ್ ರೋಶನಿ ಅವರಿಗೆ ರೈತ ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಸದಸ್ಯರು ಮನವಿ ಸಲ್ಲಿಸಿ ಮಾನವೀಯ ದೃಷ್ಠಿಯಿಂದ ಕೃಷಿ ಚಟುವಟಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ದಾಗಿ ಎಸಿಎಫ್ ಭರವಸೆ ನೀಡಿದರು.

ರೈತ ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್‍ಮಾತನಾಡಿ, ಕಳೆದ 20 ವರ್ಷಗಳಿಂದ ಕೀಯನ್ನು ಅರಣ್ಯ ಇಲಾಖೆ ಕೃಷಿಕರಿಗೆ ನೀಡಿತ್ತು. ಇದರಿಂದ ಸಮಸ್ಯೆ ಇರಲಿಲ್ಲ. ಸುಮಾರು 41 ಏಕರೆಗೂ ಅಧಿಕ ಕಾಫಿ ತೋಟದಲ್ಲಿ ನಿರಂತರ ಕೃಷಿ ಚಟುವಟಿಕೆ ನಡೆಯುತ್ತಿದೆ. ತೆರಳಲು ಅಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಗಣೇಶ್ ಮನವಿ ಮಾಡಿಕೊಂಡರು.

ಈ ಸಂದರ್ಭ ರೈತ ಮುಖಂಡರುಗಳಾದ ಕಳ್ಳಿಚಂಡ ಧನು, ಚಂಗುಲಂಡ ರಾಜಪ್ಪ, ಬಾದುಮಂಡ ಮಹೇಶ್, ಬಾಚಮಂಡ ರಾಜಾ, ಐಯಮಾಡ ಹ್ಯಾರಿ, ಮಾಣೀರ ದೇವಯ್ಯ, ಕರಿನೆರವಂಡ ರಮೇಶ್, ಅಜಿತ್, ಗುಡಿಯಂಗಡ ಮುತ್ತು, ಮಚ್ಚಮಾಡ ರಂಜಿ ಇದ್ದರು. -ಸುದ್ದಿಪುತ್ರ