ಗೋಣಿಕೊಪ್ಪಲು, ಮೇ 29 : ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತೈದು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದರೂ ಅರಣ್ಯ ಇಲಾಖೆಯು ವ್ಯಾಘ್ರನನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಈ ಬಗ್ಗೆ ನಾಲ್ಕು ದಿನಗಳಲ್ಲಿ ವ್ಯಾಘ್ರನ ಸೆರೆ ಆಗದಿದ್ದಲ್ಲಿ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ.
ತಿತಿಮತಿ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ನಿಖರ ಮಾಹಿತಿ ಇದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆಗೆ ಮುಂದಾಗುತ್ತಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರು ಈ ಬಗ್ಗೆ ಸಬೂಬುಗಳನ್ನೇ ಹೇಳುತ್ತ ದಿನ ಕಳೆಯುತ್ತಿದ್ದಾರೆ. ಇದರಿಂದ ಮುಂದೆ ಅನಾಹುತಗಳು ಸಂಭವಿಸಿದಲ್ಲಿ ಅರಣ್ಯ ಇಲಾಖೆ ಜವಾಬ್ದಾರಿ ಹೊರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ನರವತ್ತು ಎಸ್ಟೇಟ್‍ಗೆ ಭೇಟಿ ನೀಡಿದ ರೈತ ಮುಖಂಡರು ತೋಟದ ಮಾಲೀಕರಿಂದ ಮಾಹಿತಿ ಪಡೆದು ಸ್ಥಳಕ್ಕೆ ತಿತಿಮತಿ ಅರಣ್ಯ ವಲಯ ಅರಣ್ಯ ಅಧಿಕಾರಿ ಅಶೋಕ್ ಅವರನ್ನು ಬರಮಾಡಿಕೊಂಡು ಹುಲಿ ಸೆರೆಗೆ ಇಲಾಖೆಯು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಬಯಸಿದರು.
ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಅಶೋಕ್ ಮಾತನಾಡಿ ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕೆಲವೆ ದಿನಗಳಲ್ಲಿ ಆದೇಶ ಬರುವ ನಿರೀಕ್ಷೆಯಲ್ಲಿದ್ದೇವೆ. ಆದೇಶ ತಲಪಿದ ನಂತರ ಹುಲಿ ಕಾರ್ಯಾಚರಣೆಗೆ ಮುಂದಾಗುತ್ತೇವೆ. ಅಲ್ಲಿಯ ತನಕ ಮುಂಜಾಗ್ರತ ಕ್ರಮವಾಗಿ ಅರಣ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಕೈಗೊಳ್ಳಲಾಗುವದು ಎಂದರು. ಹುಲಿಯಿಂದ ಪಾರಾಗಿ ಜೀವ ಉಳಿಸಿಕೊಂಡ ಹಸುವು ಸಂಕಷ್ಟದಲ್ಲಿರುವದರಿಂದ ಇದರ ಚಿಕಿತ್ಸೆಗೆ ಬೇಕಾದ ಹಣವನ್ನು ಇಲಾಖೆಯು ಭರಿಸಲಿದೆ ಎಂದರು.
ಅರಣ್ಯ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರೂ ತಡರಾತ್ರಿ ಹುಲಿಯು ತೋಟದ ಮಾಲೀಕರ ಮನೆಯ ಸಮೀಪವಿರುವ ಹಸುವಿನ ಕೊಟ್ಟಿಗೆಯತ್ತ ಸಂಚರಿಸುತ್ತಿರುವದು ಕಂಡು ಬಂದಿದೆ.ಪಟಾಕಿ ಸಿಡಿಸಿದ ನಂತರ ವಾಪಸ್ಸಾಗುತ್ತಿರುವ ಬಗ್ಗೆ ಸಿ.ಸಿ.ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಚಿತ್ರೀಕರಣಗೊಂಡಿದೆ ಎಂದರು.
ಭೇಟಿ ಸಂದರ್ಭ ತೋಟದ ಮಾಲೀಕರಾದ ರವಿ, ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರುಗಳಾದ ಬಲ್ಯಮೀದೇರಿರ ಪ್ರವೀಣ್, ಸಂತೋಷ್, ಕಿಶೋರ್, ಆಲೇಮಾಡ ಮಂಜುನಾಥ್,ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಮುಂತಾದವರು ಹಾಜರಿದ್ದರು.
-ಹೆಚ್.ಕೆ.ಜಗದೀಶ್