ಮಡಿಕೇರಿ, ಮೇ 27: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಜಲಸ್ಫೋಟ, ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ನಮ್ಮನ್ನು ಇದುವರೆಗೆ ಸುಮಾರು ಒಂಬತ್ತು ತಿಂಗಳಿನಿಂದ ಯಾರೊಬ್ಬರೂ ಕೇಳಲಿಲ್ಲವೇಕೆ? ಈಗ ಮತ್ತೆ ಮಳೆಗಾಲ ಆರಂಭವಾಗುತ್ತಿರುವಾಗ ವಿನಾಃಕಾರಣ ತೊಂದರೆ ಕೊಡುತ್ತಿರುವದೇಕೆ? ಎಂದು ದೇವಸ್ತೂರು, ನಿಟುವಟ್ಟು, ಕಾಲೂರು, ಬಾರಿಬೆಳ್ಳಚ್ಚು ಹಾಗೂ 2ನೇ ಮೊಣ್ಣಂಗೇರಿ ಗ್ರಾಮಸ್ಥರು ಇಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಬೆಳವಣಿಗೆ ಕಂಡುಬಂತು.

ಇಂದು ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಮುಂಜಾಗ್ರತಾ ಕ್ರಮವಾಗಿ, ಸಂಬಂಧಿಸಿದ ಗ್ರಾಮಗಳಲ್ಲಿ ವಾರ್ಡ್ ಸಭೆಗಳನ್ನು ಏರ್ಪಡಿಸಿದ ಸಂದರ್ಭ ಗ್ರಾಮಸ್ಥರ ಆಕ್ರೋಶ ವ್ಯಕ್ತಗೊಂಡಿತು. ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ದೇವಸ್ತೂರು, ನಿಡುವಟ್ಟು, ಕಾಲೂರು, ಬಾರಿಬೆಳ್ಳಚ್ಚು ವ್ಯಾಪ್ತಿಯ ಗ್ರಾಮಸ್ಥರು ಪ್ರತ್ಯೇಕವಾಗಿ ಜರುಗಿದ ಸಭೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಾ, ತಮ್ಮ ಹಾನಿಗೊಂಡಿರುವ ಗದ್ದೆ, ತೋಟ, ಮನೆಗಳ ಬಗ್ಗೆ ಯಾವದೇ ರೀತಿಯಲ್ಲಿ ಸರಿಪಡಿಸುವ ಕೆಲಸ ಮಾಡಿಲ್ಲವೆಂದು ಬೊಟ್ಟು ಮಾಡಿದರು.

ಸರಕಾರದಿಂದ ಯಾವದೇ ಪರಿಹಾರ ಬಿಡುಗಡೆಯಾಗಿಲ್ಲ, ಕೆಲವರ ಖಾತೆಗಷ್ಟೇ ಹಣ ಸಂದಾಯವಾಗಿದ್ದು, ಉಳಿದವರ ಅರ್ಜಿಗಳಿಗೆ ಯಾವ ಸ್ಪಂಧನ ನೀಡಿಲ್ಲವೆಂದು ಟೀಕಿಸಿದರು.

5 ತಿಂಗಳು ಬಾಡಿಗೆ ನೀಡಿ: ಮುಂದಿನ ಮಳೆಗಾಲದಲ್ಲಿ ನಮ್ಮ ಬದುಕು ನಾವೇ ನೋಡಿಕೊಳ್ಳುತ್ತೇವೆ. ಗ್ರಾಮಸ್ಥರಿಗೆ ತಲಾ 5 ತಿಂಗಳಿನ ಬಾಡಿಗೆ ಹಣವನ್ನು ಮುಂಚಿತವಾಗಿ ನೀಡಬೇಕೆಂದು ಬೇಡಿಕೆ ಇಟ್ಟರು. ಅಲ್ಲದೆ ತಮ್ಮ ಆಸ್ತಿ ಪಾಸ್ತಿ ತೊರೆದು ಗಂಜಿ ಕೇಂದ್ರಕ್ಕೆ ಬರುವದಿಲ್ಲವೆಂದು ತೀಕ್ಷ್ಣವಾಗಿ ಉತ್ತರಿಸಿದರು.

ಮತ್ತಷ್ಟು ಆಕ್ರೋಶ: 2ನೇ ಮೊಣ್ಣಂಗೇರಿ ಗ್ರಾಮಸ್ಥರನ್ನು ಕಳೆದ ಮಳೆಗಾಲದಲ್ಲಿ ಊರಿಗೆ ಊರನ್ನೇ ಖಾಲಿ ಮಾಡಿಸಿ 198 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು ಎಂದು ಬೊಟ್ಟು ಮಾಡಿದರು. ಅಲ್ಲದೆ ಈ ಸಂದರ್ಭ ಎಲ್ಲ ಕುಟುಂಬಗಳಿಗೆ ಗ್ರಾಮ ತೊರೆಯುವಂತೆ ಸೂಚಿಸಿದ್ದ ಅಧಿಕಾರಿಗಳು ಪರ್ಯಾಯ ಮನೆಗಳ ನಿರ್ಮಾಣದ ಭರವಸೆ ನೀಡಿದ್ದಾಗಿ ಟೀಕಿಸಿದರು.

ಅನಂತರದಲ್ಲಿ ಈಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿರುವಾಗ, ಕಂದಾಯ ಅಧಿಕಾರಿಗಳು ಕೇವಲ 38 ಮಂದಿಗೆ ಮನೆ ಕಲ್ಪಿಸುವದಾಗಿ ವರದಿ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಗೆಡವಿದರು.

ಅಧ್ಯಕ್ಷ ಸಮರ್ಥನೆ: ಗ್ರಾ.ಪಂ. ಅಧ್ಯಕ್ಷ ಸುಭಾಶ್ ಸೋಮಯ್ಯ ಗ್ರಾಮಸ್ಥರ ಮಾತಿಗೆ ಧ್ವನಿಗೂಡಿಸಿ, ಇದುವರೆಗೆ ಯಾವದೇ ಇಲಾಖೆ ಅಧಿಕಾರಿಗಳು ಗ್ರಾಮಸ್ಥರುಗಳ ಕಷ್ಟ-ಸುಖ ಆಲಿಸಲು ಬಾರದಿರುವದು ಸರಿಯಲ್ಲ ಎಂದು ಜನತೆಯ ಮಾತಿಗೆ ಸಮರ್ಥನೆ ನೀಡಿದರು.

ನೋಡೆಲ್ ಅಧಿಕಾರಿಗಳಾದ ರಾಜು ಹಾಗೂ ಹೇಮಂತ್ ಕುಮಾರ್, ತಾವು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗ್ರಾಮಸ್ಥರ ಕುಂದು ಕೊರತೆ ಆಲಿಸಲು ಬಂದಿದ್ದು, ತಮ್ಮಗಳ ಅಭಿಪ್ರಾಯದ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರುವದಾಗಿ ನುಡಿದರು. ಇಂದಿನ ವಿಶೇಷ ವಾರ್ಡ್ ಸಭೆಗೆ ಬಹುತೇಕ ಗ್ರಾಮಸ್ಥರು ಪಾಲ್ಗೊಳ್ಳುವ ಬದಲು, ಜಿಲ್ಲಾಡಳಿತ ಭವನಕ್ಕೆ ಧಾವಿಸಿ ಪರಿಹಾರ ಅದಾಲತ್‍ನಲ್ಲಿ ಅರ್ಜಿ ಸಲ್ಲಿಸುತ್ತಿದ್ದ ಬೆಳವಣಿಗೆಯೂ ಗೋಚರಿಸಿತು.

ದೇವಸ್ತೂರು, ಕಾಲೂರು, 2ನೇ ಮೊಣ್ಣಂಗೇರಿಯಲ್ಲಿ ಪ್ರತ್ಯೇಕ ನಡೆದ ವಾರ್ಡ್ ಸಭೆಗಳಲ್ಲಿ ಆಯಾ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.