ಸಿದ್ದಾಪುರ, ಮೇ 27: ಬೈಕಿನಲ್ಲಿ ಬಿದ್ದು ಗಂಭೀರ ಗಾಯಗೊಂಡ ಸವಾರನೊರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಆ್ಯಂಬ್ಯುಲನ್ಸ್ ಲಭ್ಯವಿಲ್ಲ ಎಂದು ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರ ಮುಂಭಾಗ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ನೆಲ್ಯಹುದಿಕೇರಿಯ ಹೊಳೆಕರೆ ನಿವಾಸಿಯಾಗಿರುವ ವಿಶ್ವಂಬರ ಎಂಬವರು ಸಿದ್ದಾಪುರದಿಂದ ತಮ್ಮ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಮಡಿಕೇರಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯ ಗೊಂಡಿದ್ದರು. ಕೂಡಲೇ ಪರಿಚಿತರು ಅವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಕೊಂಡೊಯ್ಯಲು ಸ್ಥಳೀಯ ಸರಕಾರಿ ಆಸ್ಪತ್ರೆಯ ಆ್ಯಂಬ್ಯುಲನ್ಸ್ ಅನ್ನು ವಿಚಾರಿಸಿದಾಗ ಅದರ ಚಾಲಕ ರಜೆ ಮಾಡಿರುವ ಬಗ್ಗೆ ತಿಳಿಸಲಾಗಿದೆ. ಇದರಿಂದ ಆಕ್ರೋಶ ಗೊಂಡ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರದ ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರ ಎದುರು ಪ್ರತಿಭಟನೆ ನಡೆಸಿದರು. ನಂತರ ಒಂದು ಗಂಟೆಗೂ ಅಧಿಕ ತಡವಾಗಿ ಗೋಣಿಕೊಪ್ಪಲುವಿ ನಿಂದ ಆ್ಯಂಬ್ಯುಲನ್ಸ್ ವಾಹನ ಕರೆಸಿ, ಬಳಿಕ ಗಾಯಾಳುವನ್ನು ಮಡಿಕೇರಿಗೆ ಕರೆದೊಯ್ಯಲಾಯಿತು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಜಮಾಯಿಸಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಇದೇ ಸಂದರ್ಭ ಗ್ರಾಮಸ್ಥರು, ಜಿಲ್ಲಾ ಆರೋಗ್ಯ ಅಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ನಂತರ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಸ್ಥಳಕ್ಕಾಗಮಿಸಿ, ಸಮಸ್ಯೆಯನ್ನು ಆಲಿಸಿ ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಲಾಗುವದು, ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು. ಈ ಸಂದರ್ಭ ಸಿದ್ದಾಪುರ ವೈದ್ಯಾಧಿಕಾರಿ ಡಾ.ರಾಘವೇಂದ್ರ ಇದ್ದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸಾಬು ವರ್ಗೀಸ್, ಯತೀಶ್, ಮುರುಳಿ, ಮಂಜು, ವಿನ್ಸೆಂಟ್, ಅಜೇಶ್ ಸೇರಿದಂತೆ ಇನ್ನಿತರರು ಇದ್ದರು.