ಸೋಮವಾರಪೇಟೆ, ಮೇ 29: ಮಹಾರಾಷ್ಟ್ರದ ನರೇಂದ್ರ ದಾಬೋಲಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ತಂಡದಿಂದ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸ ಲಾಗುತ್ತಿದೆ ಎಂದು ಆರೋಪಿಸಿರುವ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು, ತಕ್ಷಣ ಅಮಾಯಕ ರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.
ಹಿಂದುತ್ವದ ಪರ ಹೋರಾಟ ಗಾರರಿಗೆ ಕಾನೂನು ನೆರವು ಒದಗಿಸುತ್ತಿದ್ದ ಮಹಾರಾಷ್ಟ್ರದ ವಕೀಲರು ಹಾಗೂ ಹಿಂದು ವಿಧಿವಿಜ್ಞ ಪರಿಷತ್ನ ರಾಷ್ಟ್ರೀಯ ವಕ್ತಾರರೂ ಆದ ಸಂಜೀವ ಪುನಾಳೆಕರ್ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ್ ಬಾವೆ ಅವರುಗಳನ್ನು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣ ದಲ್ಲಿ ವಿನಾಕಾರಣ ಸಿಲುಕಿಸುವ ಹುನ್ನಾರದಿಂದ ಸಿಬಿಐ ಸಂಸ್ಥೆ ಬಂಧಿಸಿದೆ ಎಂದು ಸಮಿತಿಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಇದರೊಂದಿಗೆ ಸಿಬಿಐ ನಿಲುವಿನ ಬಗ್ಗೆಯೂ ತನಿಖೆ ನಡೆಯಬೇಕು. ತನಿಖಾಧಿಕಾರಿಯನ್ನು ಬದಲಾಯಿಸ ಬೇಕು. ಬಂದಿತ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ಶಿರಸ್ತೇದಾರ್ ವೆಂಕಟೇಶ್ ಮೂಲಕ ಗೃಹ ಸಚಿವರಿಗೆ ಸಲ್ಲಿಸಲಾಯಿತು. ಸಮಿತಿಯ ಮಧು ಕಿಬ್ಬೆಟ್ಟ, ಕೊಮಾರಿ ಸತೀಶ್, ಗೌಡಳ್ಳಿ ಸುನಿಲ್, ಪಿ. ಮಧು, ಜಗನ್ನಾಥ್, ಈರಪ್ಪ, ಸೋಮೇಶ್, ಲಕ್ಷ್ಮೀಕುಮಾರ್, ಅಶೋಕ್, ಮನು ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.