ವೀರಾಜಪೇಟೆ, ಮೇ 27: ಕಾರ್ಮಿಕರು ಕೇವಲ ಪರಿಹಾರ ಮತ್ತು ಸೌಲಭ್ಯಗಳಿಗಾಗಿ ಒಂದಾಗದೆ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯೂ ಧ್ಯೇಯವಾಗಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘದ (ಸಿ.ಐ.ಟಿ.ಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹೇಳಿದ್ದಾರೆ.

ವೀರಾಜಪೇಟೆಯ ಪುರಭವನದಲ್ಲಿ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ ಹಾಗೂ ಕಾರ್ಮಿಕ ಕಲ್ಯಾಣ ಸಂಸ್ಥೆಗಳ ಒಕ್ಕೂಟದ 11ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಈ ವಿಷಯವನ್ನು ತಿಳಿಸಿದರು.

ಕಾರ್ಮಿಕ ವಿರೋಧಿ ಮತ್ತು ಬಂಡವಾಳಶಾಹಿ ಶಕ್ತಿಗಳ ಅಧಿಕಾರದ ಪರಿಣಾಮ ಕಾರ್ಮಿಕರ ಶೋಷಣೆಯಾಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಐ.ಆರ್. ಪ್ರಮೋದ್, ಸರಕಾರದ ಮರಳು ನೀತಿಯಿಂದಾಗಿ ಕಟ್ಟಡ ಕಾರ್ಮಿಕರಿಗೆ ಕೆಲಸ ಅಲಭ್ಯವಾಗುತ್ತಿದೆ. ಸರಕಾರವು ಮರಳು ನೀತಿಯನ್ನು ಪುನರ್ ಪರಿಶೀಲಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಸಾಬು ಕಾರ್ಯಕ್ರಮಗಳನ್ನು ನಿರೂಪಿಸಿದರು. ಸಿ.ಐ.ಟಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಸುಳ್ಯ ತಾಲೂಕಿನ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಿ.ಕೆ. ಜಾನ್, ಸಿ.ಐ.ಟಿ.ಯು. ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ, ಸಾಜಿ ಪೌಲೋಸ್ ವೇದಿಕೆಯಲ್ಲಿದ್ದರು.