ಮಡಿಕೇರಿ, ಮೇ 27: ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತದಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರ ಸಾಲವನ್ನು ರೈತರ ಸಾಲದಂತೆ ಸಂಪೂರ್ಣ ಮನ್ನಾ ಮಾಡಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್ ಹೇಳಿಕೆ ನೀಡಿ ಕಳೆದ ಕೆಲವು ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಜರ್ಝರಿತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ತೀವ್ರ ಬೆಳೆ ಕುಂಠಿತ ಮತ್ತು ಬೆಲೆ ಕುಸಿತದಿಂದಾಗಿ ಸಾಲ ಮಾಡಿ ಹಾಕಿರುವ ಬಂಡವಾಳ ಕೈಗೆ ಬರದಂತಾಗಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ತೋಟ ನಿರ್ವಹಣೆ ಮಾಡಲಾಗದೆ, ಪಡೆದ ಸಾಲ ತೀರಿಸಲಾಗದೆ ಪರದಾಡುತ್ತಿದ್ದಾರೆ ಎಂದÀು ಆತಂಕ ವ್ಯಕ್ತಪಡಿಸಿದ್ದಾರೆ. ತೋಟ ನಿರ್ವಹಣೆ ಮಾಡಲಾಗದೆ ಅವುಗಳನ್ನು ಮಾರುವ ಸ್ಥಿತಿಯಲ್ಲಿ ಬೆಳೆಗಾರರಿದ್ದರೆ, ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗಾಗಿ ಬೆಳೆಗಾರರನ್ನು ಪ್ರತಿದಿನ ಪೀಡಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಳೆಗಾರರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲಾದರೂ ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಲಕ್ಷಾಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟಿರುವ ಕಾಫಿ ಉದ್ಯಮವನ್ನು ಮತ್ತು ಬೆಳೆಗಾರರನ್ನು ಉಳಿಸಬೇಕು, ರೈತರ ಸಾಲ ಮನ್ನಾದಂತೆ ಕಾಫಿ ಬೆಳೆಗಾರರ ಸಾಲವನ್ನೂ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆಗಾರರು ಆರ್ಥಿಕವಾಗಿ ಚೇತರಿಸಿಕೊಳ್ಳುವವರೆಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗೆ ಮುಂದಾಗದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಬೆಳೆಗಾರರು ಮತ್ತು ಉದ್ಯಮದ ಹಿತದೃಷ್ಠಿಯಿಂದ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಜಿಎಫ್ ಮಾಜಿ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರ ನೆರವಿಗೆ ಧಾವಿಸದಿದ್ದಲ್ಲಿ ಕಾರ್ಮಿಕರು ಮತ್ತು ಬೆಳೆಗಾರರು ಬೀದಿ ಪಾಲಾಗಬೇಕಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. ಕೆಜಿಎಫ್ ಉಪಾಧ್ಯಕ್ಷ ಡಿ.ಎಂ. ವಿಜಯ್, ಪ್ರಧಾನ ಕಾರ್ಯದರ್ಶಿ ಎಸ್. ಮುರಳೀಧರ್ ಬಕ್ಕರವಳ್ಳಿ, ಸಂಘಟನಾ ಕಾರ್ಯದರ್ಶಿ ರೇವಣ್ಣಗೌಡ ಈ ಜಂಟಿ ಹೇಳಿಕೆ ನೀಡಿದ್ದಾರೆ.