ಸೋಮವಾರಪೇಟೆ, ಮೇ 28: ಪಟ್ಟಣದ ರೇಂಜರ್ ಬ್ಲಾಕ್ನಲ್ಲಿ ಕಳೆದ ಕೆಲ ದಶಕಗಳ ಹಿಂದೆ ದಾನವಾಗಿ ನೀಡಿದ್ದ ಜಾಗಕ್ಕೆ ಸಂಬಂಧಿಸಿದಂತೆ ದೇವಾಲಯ ಸಮಿತಿ ಮತ್ತು ಮಸೀದಿ ಸಮಿತಿಯ ನಡುವೆ ಉಂಟಾಗಿದ್ದ ವಿವಾದ ಸರ್ವೆ ಮೂಲಕ ಇತ್ಯರ್ಥಗೊಂಡಿದೆ.
ಕಳೆದ ಐದು ದಶಕಗಳ ಹಿಂದೆ ಟ್ರಸ್ಟ್ ವತಿಯಿಂದ ಹನಫಿ ಜಾಮಿಯ ಮಸೀದಿಗೆ ಸುಮಾರು 11 ಎಕರೆ ಜಾಗವನ್ನು ದಾನವಾಗಿ ನೀಡಲಾಗಿತ್ತು. ಒಂದೇ ಬೌಂಡರಿಯ ಒಳಗೆ ವನದುರ್ಗಿ, ಗುಳಿಗ ಮತ್ತು ಚೌಡಿ ದೇವಾಲಯಗಳು ಇದ್ದು, ಪ್ರಸಕ್ತ ಸಾಲಿನ ವಾರ್ಷಿಕ ಮಹಾಪೂಜೋತ್ಸವ ಸಂದರ್ಭ ಅನ್ಯಕೋಮಿನ ಕೆಲವರು ದೇವಾಲಯ ಜಾಗಕ್ಕೆ ಸಂಬಂಧಿಸಿದಂತೆ ಅಪಸ್ವರ ಎತ್ತಿದ್ದರಿಂದ ಎರಡೂ ಕಡೆಯವರ ಮಧ್ಯೆ ವಿಷಮ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಂತರ ಪೊಲೀಸ್ ಬಂದೋಬಸ್ತ್ನಲ್ಲಿ ಪೂಜಾಕಾರ್ಯಗಳು ನಡೆದಿದ್ದವು. ಈ ಮಧ್ಯೆ ಮಸೀದಿಯ ಪದಾಧಿಕಾರಿಗಳು ಜಾಗದ ಸರ್ವೆ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಪೂಜೋತ್ಸವದ ನಂತರ ಜಿಲ್ಲಾಧಿಕಾರಿಗಳ ಸಮಕ್ಷಮ ಉಭಯ ಕಡೆಯವರ ನಡುವೆ ಸಭೆ ನಡೆದು, ಉದ್ದೇಶಿತ ಜಾಗದ ಸರ್ವೆಗೆ ಡಿ.ಸಿ. ಆದೇಶ ನೀಡಿದ್ದರು. ಅದರಂತೆ ಇಂದು ಹರೀಶ್ಚಂದ್ರ ಮತ್ತು ವಿನಯ್ ಅವರುಗಳ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.
ದೇವಾಲಯ ಇರುವ ಜಾಗವು ಸರ್ವೆ ನಂ.50ರಲ್ಲಿದ್ದು, ಈ ಜಾಗವು ಮಠಕ್ಕೆ ಸೇರಿರುವ ಬಗ್ಗೆ ತಿಳಿದುಬಂತು. ಆದರೆ ದೇವಾಲಯಕ್ಕೆ ತೆರಳಲು ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಕಚ್ಚಾ ರಸ್ತೆಯ ಕೆಲ ಪ್ರದೇಶ ಮಾತ್ರ ಹನಫಿ ಜಾಮಿಯಾ ಮಸೀದಿಗೆ ಸೇರಿದ್ದು, ದೇವಾಲಯದ ಜಾಗಕ್ಕೂ ಮಸೀದಿಗೆ ದಾನ ನೀಡಿರುವ ಜಾಗಕ್ಕೂ ಸಂಬಂಧವಿಲ್ಲದಿರುವದು ಸರ್ವೆ ಮೂಲಕ ಖಾತ್ರಿಯಾಯಿತು. ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಡಿ ಗುರುತಿಸಿ ಕಲ್ಲುಗಳನ್ನು ನೆಟ್ಟರು. ಮಸೀದಿಗೆ ಸೇರಲ್ಪಟ್ಟ ಜಾಗದಲ್ಲಿ ಕೆಲ ಮೀಟರ್ ಗಳಷ್ಟು ಜಾಗ ದೇವಾಲಯದ ರಸ್ತೆಗೆ ಆವಶ್ಯವಿರುವದರಿಂದ, ಬಿಟ್ಟುಕೊಡುವ ಬಗ್ಗೆ ಸ್ಥಳದಲ್ಲಿದ್ದ ಪ್ರಮುಖರು ತೀರ್ಮಾನಿಸಿದರು.
ಸರ್ವೆ ನಡೆಯುವ ಸಂದರ್ಭ ವಕ್ಫ್ ಬೋಡ್ರ್ನ ಸಲಹಾ ಸಮಿತಿ ಅಧ್ಯಕ್ಷ ಯಾಕೂಬ್, ಹನಫಿ ಜಾಮಿಯ ಮಸೀದಿ ಅಧ್ಯಕ್ಷ ಮುಕ್ರಂ ಬೇಗ್ ಬಾಬು, ಕಾರ್ಯದರ್ಶಿ ಯಾಸೀನ್, ದೇವಾಲಯ ಸಮಿತಿಯ ಶಿವಪ್ರಸಾದ್, ಸುಧಾಕರ್, ಅನಿಲ್, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಿವೈಎಸ್ ಪಿ ದಿನಕರ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್ ರಾಜ್ ಸೇರಿದಂತೆ ಸಿಬ್ಬಂದಿಗಳು, ಜಿಲ್ಲಾ ಮೀಸಲು ಪಡೆಯ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು