ನಾಪೆÇೀಕ್ಲು, ಮೇ 28: ಕೊಡಗು ಹಿಂದೆಂದೂ ಕಂಡು, ಕೇಳರಿಯದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ವರ್ಷಗಳೂ ಕಳೆದಿಲ್ಲ. ಅದರ ಕರಾಳ ಛಾಯೆ, ಭಯ, ಭೀತಿ ಇನ್ನೂ ಜನಮಾನಸದಲ್ಲಿ ಹಾಗೇ ಉಳಿದಿದೆ. ಈ ವರ್ಷದ ಮಳೆಗಾಲದಲ್ಲಿ ಮತ್ತಿನ್ನೇನಾಗುವದೋ ಎನ್ನುವ ಆತಂಕವೂ ಇದ್ದೇಇದೆ. ಈ ಬಗ್ಗೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆಯ ಗೋಪುರದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಹಂತ ತಲಪಿದೆ. ಗೋಪುರದ ಒಳಭಾಗದಲ್ಲಿ ಎರಡು- ಮೂರು ಇಂಚುಗಳಷ್ಟು ಗೋಡೆ ಮುಂಭಾಗಕ್ಕೆ ವಾಲಿದೆ. ಹೆಬ್ಬಾಗಿಲು ಅಲುಗಾಡುತ್ತಿದೆ. ಇದರ ನಿರ್ವಹಣೆಯ ಉಸ್ತುವಾರಿ ವಹಿಸಿರುವ ರಾಜ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಅಪಾಯ ಸಂಭವಿಸುವ ಮೊದಲು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಇತಿಹಾಸ ಪ್ರಸಿದ್ಧವಾದ ಈ ಅರಮನೆಯನ್ನು 1789-91ರ ಕಾಲ ಘಟ್ಟದಲ್ಲಿ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ. ಇದು ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿದ್ದು, ದೊಡ್ಡ ದೊಡ್ಡ ಮರದ ತೊಲೆಗಳಿಂದ ಮಂಗಳೂರು ಹೆಂಚಿನ ಸಹಾಯದಿಂದ ನಿರ್ಮಿಸಲಾದ ಎರಡಂತಸ್ತಿನ ದೊಡ್ಡ ಕಟ್ಟಡ. ಇದರಲ್ಲಿ ಸುಂದರ ವಾಸ್ತು ಶಿಲ್ಪ ಮತ್ತು ಕೆತ್ತನೆಗಳನ್ನು ಯಥೇಚ್ಚವಾಗಿ ಕಾಣಬಹುದಾಗಿದೆ. ಎದುರಿಗೆ ದೊಡ್ಡದಾದ ಹೆಬ್ಬಾಗಿಲು, ಒಳಗೆ ವಿಶಾಲವಾದ ಪ್ರಾಂಗಣ, ಅರಮನೆಯ ಎಡ ಪಾಶ್ರ್ವದಲ್ಲಿ ಸುಂದರವಾಗಿ ನಿರ್ಮಿಸಿದ ಮದುವೆ ಮಂಟಪವಿದೆ. ರಾಜ ವೀರರಾಜೇಂದ್ರನ ಸಹೋದರಿ ದೇವಮ್ಮಾಜಿಯ ವಿವಾಹಕ್ಕೆ ಈ ಮಂಟಪವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತಿದೆ. ಮುಂದೆ ಅರಮನೆಯ ಮೆಟ್ಟಲೇರಿದರೆ ಎಡಕ್ಕೆ ದೊಡ್ಡ ಚಾವಡಿ, ಕೆಳ ಅಂತಸ್ತಿನಲ್ಲಿ ಐದಾರು ಕೊಠಡಿಗಳಿವೆ. ಅರಮನೆಯ ಮಧ್ಯಭಾಗದಲ್ಲಿರುವ ಕೋಣೆಯ ಗೋಡೆಗೆ ಅಳವಡಿಸಿರುವ ಏಳೆಂಟು ರಂಧ್ರಗಳ ಕಿಟಕಿಯ ಯಾವದೇ ರಂಧ್ರದ ಮೂಲಕ ಬಂದೂಕಿನ ನಳಿಕೆಯನ್ನು
ತೂರಿಸಿ ಗುಂಡು ಸಿಡಿಸಿದರೂ ಹೆಬ್ಬಾಗಿಲಿನ ಮೂಲಕ ನುಗ್ಗಿ ಬರುವ ಶತ್ರುವಿನ ಎದೆ ಸೀಳುವಂತೆ ಅಳವಡಿಸಲಾಗಿದೆ. ಕೆಳಗಿನಿಂದ ಮೇಲಂತಸ್ತಿಗೆ
(ಮೊದಲ ಪುಟದಿಂದ) ಸಾಗುವ ಮರದ ಏಣಿ ಏರಿ ಹೋದರೆ ದೊಡ್ಡದಾದ ರಾಜನ ದರ್ಬಾರ್ ಎದುರಾಗುತ್ತದೆ. ಒಳಗಿನ ಚಾವಡಿಯ ಎರಡು ಬದಿಯಲ್ಲಿ ರುವ ರಾಜ ಮತ್ತು ರಾಣಿಯರ ಪ್ರತ್ಯೇಕ ಕೊಠಡಿಗಳು; ಈ ಕೋಣೆಗಳ ಗೋಡೆಗಳಲ್ಲಿ ಅಪರೂಪದ ಪ್ರಸಿದ್ಧ ಕಲಾಕೃತಿಗಳನ್ನು ಕಾಣಬಹುದು. ಇದರ ನಿರ್ವಹಣೆ ಇದೇ ರೀತಿ ನಡೆದರೆ ಮುಂದೆ ಇದು ಬರೀ ಕಲ್ಪನೆಯಾಗಬಹುದು ಎನ್ನಲಾಗುತ್ತಿದೆ.
ಅಪಾಯ ಭೀತಿ: ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿರುವದು, ಬಾಗಿಲು ಅಲುಗಾಡುತ್ತಿರುವ ಬಗ್ಗೆ ಸ್ಥಳೀಯರಿಗೆ ಮಾತ್ರ ತಿಳಿದಿದೆ. ದೂರದ ಊರುಗಳಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಪರಿಸರ ಸೊಬಗಿಗೆ ಮನಸೋತು, ಯಾವದೇ ಅಪಾಯದ ಮನ್ಸೂಚನೆ ಇಲ್ಲದೆ ಗೋಪುರವನ್ನು ವೀಕ್ಷಿಸುತ್ತಾರೆ. ಇದರ ಬಳಿಯೇ ವಿಹರಿಸುತ್ತಾರೆ. ಮುಂದಿನ ವಾರದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿ ರುವದರಿಂದ ಒಂದೆರಡು ಮಳೆ, ಗಾಳಿಗೆ ಇದು ಧರೆಗುರುಳಿದರೂ ಅಚ್ಚರಿಯಿಲ್ಲ. ಅದರೊಂದಿಗೆ ಗೋಪುರದಿಂದ ಕೆಲವೇ ಅಡಿಗಳ ಅಂತರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆ ಆರಂಭಗೊಂಡರೆ ಶಾಲಾ ಮಕ್ಕಳು ಇದರ ಬಳಿಯೇ ತಿರುಗಾಡುತ್ತಾರೆ. ಈ ಬಗ್ಗೆ ಸಂಬಂಧಿಸಿದರು ಕೂಡಲೇ ಗಮನ ಹರಿಸಬೇಕಾಗಿದೆ. ನಂತರ ಚಿಂತಿಸಿ ಫಲವಿಲ್ಲದಂತಾಗುತ್ತದೆ.
ಪ್ರವಾಸಿಗರ ಸಂಖ್ಯೆ ಕಡಿಮೆ: ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸುತ್ತಲಿನ ರೆಸಾರ್ಟ್, ಹೋಂ ಸ್ಟೇ ಗೆ ಆಗಮಿಸುವ ಪ್ರವಾಸಿಗರು ಮಾತ್ರ ಇಲ್ಲಿಗೆ ಭೇಟಿ ನೀಡುತ್ತಿರುವದು ಕಂಡು ಬರುತ್ತಿದೆ. ಪ್ರವಾಸಿಗರು ಕಡಿಮೆಯಿರುವದರಿಂದ ಇಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲು ಸುಗಮವಾಗಲಿದೆ ಎಂಬದು ಸ್ಥಳೀಯರ ಅಭಿಪ್ರಾಯವಾಗಿದೆ.
ಕೆಟ್ಟು ನಿಂತಿರುವ ಸೋಲಾರ್ ದೀಪಗಳು: ಅರಮನೆಯ ರಕ್ಷಣೆಗಾಗಿ ಇಲ್ಲಿ ಐದು ವರ್ಷಗಳ ಹಿಂದೆ ಸರಕಾರ ಸೋಲಾರ್ ದೀಪದ ವ್ಯವಸ್ಥೆ ಕೈಗೊಂಡಿದೆ. ಆದರೆ ಇದನ್ನು ಅಳವಡಿಸಿದ ಕೆಲವು ತಿಂಗಳಿಂದಲೇ ಹೊರ ಭಾಗದ ಸೋಲಾರು ದೀಪಗಳು ಉರಿಯುತ್ತಿಲ್ಲ. ಅದನ್ನು ಇಲ್ಲಿಯವರೆಗೂ ದುರಸ್ತಿ ಗೊಳಿಸುವ ಕೆಲಸ ಮಾಡಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಪ್ರವಾಸಿಗರ ಅಳಲು: ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದ ಬಗ್ಗೆ ಪ್ರವಾಸಿಗರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಹಲವು ವರ್ಷಗಳ ಹಿಂದೆ ನೂತನ ಶೌಚಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿವರೆಗೂ ಅದನ್ನು ಬಳಸುವ ಸೌಭಾಗ್ಯ ಯಾರಿಗೂ ದೊರೆತಿಲ್ಲ. ಕಟ್ಟಡ ಈಗ ಪೂರ್ತಿ ಕಾಡುಪಾಲಾಗಿದೆ. ಆಗಮಿಸುವ ಪ್ರವಾಸಿಗರಿಗೆ ನಾಮ ಫಲಕ, ರಸ್ತೆ ಸೂಚನಾ ಫಲಕ ಇಲ್ಲದಿರುವದ ರೊಂದಿಗೆ ಕೈಕಂಬದಿಂದ ಅರಮನೆಯ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟರುವದು ಆಕ್ಷೇಪಕ್ಕೆ ಕಾರಣವಾಗಿದೆ. ಇದರೊಂದಿಗೆ ಸರಕಾರ ಅರಮನೆಯ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಮಾಡಿಕೊಡ ಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.