ಸಿದ್ದಾಪುರ, ಮೇ 28: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿದೆ.
ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕ್ರೆ ಅತ್ತಿಮಂಗಲ ಬಳಿ ಇರುವ ಮೇರಿ ಲ್ಯಾಂಡ್ ಕಾಫಿ ತೋಟದ ಒಳಗೆ ಬೀಡುಬಿಟ್ಟಿದ್ದ 8 ಕಾಡಾನೆಗಳ ಹಿಂಡಿನ ಪೈಕಿ ಅಂದಾಜು 20 ವರ್ಷ ಪ್ರಾಯದ ಹೆಣ್ಣಾನೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ದಂದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದರು. ಬೆಳಗ್ಗೆ 10 ಗಂಟೆಗೆ ಮೇರಿ ಲ್ಯಾಂಡ್ ಕಾಫಿ ತೋಟದ ಒಳಗೆ ದುಬಾರೆ ಹಾಗೂ ಮತ್ತಿಗೋಡಿನ 8 ಸಾಕಾನೆಗಳಿಗೆ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಕಾರ್ಯಾ ಚರಣೆಗಿಳಿದ ತಂಡ ಕಾಫಿ ತೋಟದ ಒಳಗೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಕಾಡಾನೆ ಹಿಂಡು ಕಾಣಿಸಿ ಕೊಂಡಿದೆ.
(ಮೊದಲ ಪುಟದಿಂದ) ಹಿಂಡಿನಲ್ಲಿ ಉಪಟಳ ನೀಡುತ್ತಿರುವ ಕುಳ್ಳ ಜಾತಿಯ ಪುಂಡಾನೆಯನ್ನು ಗುರುತಿಲಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಹಾಗೂ ವನ್ಯಜೀವಿ ವೈದ್ಯಾಧಿಕಾರಿ ಮುಜೀಬ್ ರಹಮಾನ್ ಅವರು ಸೆರೆ ಹಿಡಿಯಲು ಮುಂದಾದರು. ಕೂಡಲೇ ವೈದ್ಯಾಧಿಕಾರಿ ಅರವಳಿಕೆ ಚುಚ್ಚುಮದ್ದನ್ನು ಕಾಡಾನೆಗೆ ಹಾರಿಸಿದರು. ಈ ಸಂದರ್ಭ ಕಾಡಾನೆಯು ಕೊಂಚ ದೂರ ಓಡಿ, ಬಳಿಕ ತೋಟದಲ್ಲೇ ನೆಲಕ್ಕುರುಳಿತು. ಇದಾದ ಬಳಿಕ ಸಾಕಾನೆಗಳು ಸುತ್ತುವರೆದು, ಕಾಡಾನೆಗೆ ನೀರು ಸುರಿದು ನಂತರ ದಪ್ಪವಾದ ಹಗ್ಗಗಳಿಂದ ಕಾಡಾನೆಯ ಕುತ್ತಿಗೆ ಹಾಗೂ ಕಾಲುಗಳಿಗೆ ಕಟ್ಟಲಾಯಿತು.
ಕಾಫಿ ತೋಟದ ಮದ್ಯದಿಂದ ಸಾಕಾನೆಗಳ ಸಹಾಯದಿಂದ ಸಾರ್ವಜನಿಕ ರಸ್ತೆಯ ಮೂಲಕ ಕರೆತರಲಾಯಿತು. ಈ ಸಂದರ್ಭ ಪುಂಡಾನೆಯು ತೋಟದೊಳಗಿನಿಂದ ಬರಲು ನಿರಾಕರಿಸಿ, ರಸ್ತೆಯಿಂದ ತೋಟದ ಓಳಕ್ಕೆ ಓಡಲು ಪ್ರಯತ್ನಿಸುತ್ತಿತ್ತು. ಇದಕ್ಕೆ ಆಸ್ಪದ ನೀಡದ ಸಾಕಾನೆಗಳು ಕಾಡಾನೆಯನ್ನು ಎಳೆದು ಮುಂದಕ್ಕೆ ಕರೆತಂದವು. ಇದಾದ ಬಳಿಕ ಮುಖ್ಯ ರಸ್ತೆಯ ಬಳಿ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸುವ ಸಂದರ್ಭ ಸಾಕಾನೆಗಳು ಹಲವು ಬಾರಿ ಲಾರಿಗೆ ದೂಡಿದರೂ ಕಾಡಾನೆ ಲಾರಿಯನ್ನು ಏರಲೇ ಇಲ್ಲ. ಈ ಸಂದರ್ಭ ಅಭಿಮನ್ಯು ಹಾಗೂ ಹರ್ಷ ಕಾಡಾನೆಯನ್ನು ದೂಡಿ ಲಾರಿಗೆ ಹತ್ತಿಸಿದವು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಒಟ್ಟು 70 ಮಂದಿ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳಾದ ಅಭಿಮನ್ಯು, ಕೃಷ್ಣ ದುಬಾರೆ ಸಾಕಾನೆ ಶಿಬಿರದ ಹರ್ಷ, ಧನಂಜಯ, ಲಕ್ಷ್ಮಣ, ಈಶ್ವರ, ಅಜ್ಜಯ್ಯ, ವಿಕ್ರಂ ಪಾಲ್ಗೊಂಡಿದ್ದವು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮಡಿಕೇರಿ ವಿಭಾಗದ ಡಿ.ಎಫ್.ಓ. ಮಂಜುನಾಥ್ ಮಾತನಾಡಿ, ಸ್ಥಳೀಯರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರು ಪುಂಡಾನೆ ಸೆರೆಗೆ ಮನವಿ ಸಲ್ಲಿಸಿದ್ದು, ಸಾಕಾನೆಗಳ ಸಹಾಯದಿಂದ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಸರಕಾರ 2 ಕಾಡಾನೆ ಸೆರೆಗೆ ಅನುಮತಿ ನೀಡಿದ್ದು, ಇನ್ನೊಂದು ಕಾಡಾನೆಯನ್ನು ಮೋದೂರಿನಲ್ಲಿ ಹಿಡಿಯಲಾಗುವದು. ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಿ, ಪಳಗಿಸಲಾಗುವದು ಎಂದರು.
ಕಾರ್ಯಾಚರಣೆಯಲ್ಲಿ ಎ.ಸಿ.ಎಫ್. ಚಿಣ್ಣಪ್ಪ, ಆರ್.ಎಫ್.ಓ. ಅರುಣ್, ಉಪ ವಲಯ ಅರಣ್ಯಾಧಿಕಾರಿ ರಂಜನ್, ವಿಲಾಸ್ ಗೌಡ ಹಾಗೂ ಸಿಬ್ಬಂದಿ, ಮಾವುತರು ಇದ್ದರು.
ಅಮ್ಮತ್ತಿ ಹೋಬಳಿ ರೈತ ಸಂಘದ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ, ಇತ್ತೀಚೆಗೆ ನಾಗರಹೊಳೆಯಲ್ಲಿ ರೈತ ಸಂಘ ಸಭೆ ನಡೆಸಿ ಕಾಡಾನೆ ಸೆರೆಗೆ ಒತ್ತಾಯಿಸಿತ್ತು. ಇದೀಗ ಕಾಡಾನೆಯನ್ನು ಸೆರೆ ಹಿಡಿದಿರುವದು ಸ್ವಾಗತಾರ್ಹ ಎಂದರು. -ಚಿತ್ರ , ವರದಿ: ವಾಸು