ಮಡಿಕೇರಿ, ಮೇ 27: ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಅಭಾವ ಉಂಟಾಗಿದೆ. ನದಿ ಮೂಲಗಳು, ಅಂತರ್ಜಲ ಬತ್ತಿಹೋಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತುರ್ತು ಕುಡಿಯುವ ನೀರಿಗಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ತಿಳಿಸಿದ್ದಾರೆ.

ಶಾಂತಳ್ಳಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮಿಷ್ಟದಂತೆ ಕ್ರಿಯಾ ಯೋಜನೆಗಳನ್ನು ತಯಾರಿಸುತ್ತಿರುವದರಿಂದ ನಿಜವಾದ ಅವಶ್ಯಕತೆ ಎಲ್ಲಿದೆಯೋ ಅಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವದು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಕ್ಷರು ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.

ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿರುವ ಅವರು, ತಾಲೂಕಿಗೆ ತಲಾ ರೂ. 5 ಕೋಟಿ ಅನುದಾನ ಅವಶ್ಯಕತೆಯಿದ್ದು, ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.