*ಶ್ರೀಮಂಗಲ, ಮೇ 29: ಶ್ರೀಮಂಗಲ ಹೋಬಳಿಯ ನೆಮ್ಮಲೆ, ಬೀರುಗ ಗ್ರಾಮದ ಮಾಣಿರ ವಿಜಯ ನಂಜಪ್ಪ, ಅಜ್ಜಾಮಾಡ ಪೂಣಚ್ಚ, ಅಜ್ಜಾಮಾಡ ಸೋಮಣ್ಣ, ಮೋಹನ, ಕಟ್ಟೆರ ಮೇದಪ್ಪ, ಅರಸು, ಮಾಣೀರ ಮದು, ಮಾಣಿರ ತಿಲಕ್ ಅವರ ತೋಟದಲ್ಲಿ ಕಾಫಿ, ಅಡಕೆ, ಬಾಳೆ ಗಿಡಗಳನ್ನು ಕಾಡಾನೆಗಳ ಹಿಂಡುಗಳು, ನಾಶ ಮಾಡಿ ತೋಟದಲ್ಲಿ ಸುಮಾರು 13 ಆನೆಗಳು ಬೀಡು ಬಿಟ್ಟಿವೆ, ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆಯ ಜೊತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರಾದ ಅಜ್ಜಾಮಾಡ ಸೋಮಣ್ಣ, ಪೂಣಚ್ಚ ಮಾಣೀರ ಸಂಜು, ಅಯ್ಯಮಾಡ ಗಣೇಶ್, ರವಿ, ಯೋಗೇಶ್, ಜಿಲ್ಲಾ ಕಾರ್ಯದರ್ಶಿ ಅಜ್ಜಾಮಾಡ ಟಿ .ಚಂಗಪ್ಪ, ಗ್ರಾಮಸ್ಥರಾದ ಮಾಣೀರ ಮಧು, ಉಮೇಶ್, ತಿಲಕ್, ವಿಜಯ ನಂಜಪ್ಪ, ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಅರಣ್ಯ ಇಲಾಖೆಯ ಆರ್.ಎಫ್.ಓ. ವೀರೆಂದ್ರ ರೈತರಿಗೆ ಆದ ನಷ್ಟವನ್ನು ಸಂಪೂರ್ಣವಾಗಿ ಭರಿಸುವದಾಗಿ ಹೇಳಿದ್ದಾರೆ. ಕಷ್ಟ ಪಟ್ಟು ದುಡಿದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ, ಅಡಕೆ, ಕಾಫಿ ಬೆಳೆದ ಪಾಪದ ರೈತನಿಗೆ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ.
ಶ್ರೀಮಂಗಲ ಹೋಬಳಿಯ ಎಲ್ಲಾ ಗ್ರಾಮದಲ್ಲಿ ಆನೆಗಳ ಕಾಟ ಮಿತಿಮೀರಿ ಹೋಗಿದೆ, ಅರಣ್ಯ ಅಧಿಕಾರಿಗಳು ದಿನಕ್ಕೊಂದು ಕಾರಣ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ.
ಕೂಡಲೇ ಬೆಳೆ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ನೀಡಬೇಕು ಮತ್ತು ಆನೆಗಳನ್ನು ಕೂಡಲೇ ಕಾಡಿಗಟ್ಟಬೇಕು, ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುತ್ತದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಾಮಾಡ ಟಿ ಚಂಗಪ್ಪ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ ಕೂಡಲೇ ಇದರ ಬಗ್ಗೆ ಕಾಳಜಿ ವಹಿಸಬೇಕು, ಅರಣ್ಯ ಇಲಾಖಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಆನೆ ಓಡಿಸಲು ಬರುವ ಅರಣ್ಯ ಇಲಾಖೆಯ ಶೇ. 90% ಸಿಬ್ಬಂದಿ ತಾತ್ಕಾಲಿಕ ಸಿಬ್ಬಂದಿಯಾಗಿದ್ದು, ಇವರಿಗೆ ಅರಣ್ಯ ಇಲಾಖೆ ಸರಿಯಾದ ಸವಲತ್ತುಗಳನ್ನು ನೀಡುತ್ತಿಲ್ಲ ಮತ್ತು ರಕ್ಷಣೆಗೆ ಬಂದೂಕು, ಪಟಾಕಿ, ಸರಿಯಾಗಿ ನೀಡುತ್ತಿಲ್ಲ, ಕನಿಷ್ಟ ಪಕ್ಷ ಇವರಿಗೆ ತಿಂಗಳ ವೇತನವನ್ನು ಸರಿಯಾಗಿ ನೀಡುತ್ತಿಲ್ಲ್ಲ ಮತ್ತು ಈ ಬಾಗದಲ್ಲಿ ಖಖಖಿ ಎಂಬ ಯಾವದೇ ತಂಡಗಳಿಲ್ಲ ಎಂದು ರೈತರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಎ.ಸಿ.ಎಫ್. ದಯಾನಂದ್ ಅವರು ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.