ಸೋಮವಾರಪೇಟೆ, ಮೇ.29: ಪಟ್ಟಣದ ಜೂನಿಯರ್ ಕಾಲೇಜು ಸಮೀಪದ ಗೂಡಂಗಡಿ ಮತ್ತು ಐಗೂರು ಗ್ರಾಮದ ಹೋಂ ಸ್ಟೇಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿನ್ನೆ ದಿನ ಐಗೂರು ಗ್ರಾಮದ ಸ್ಪ್ರಿಂಗ್ ವ್ಯಾಲಿ ಹೋಂ ಸ್ಟೇಗೆ ಭೇಟಿ ನೀಡಿದ್ದ ಯಡವಾರೆ ಗ್ರಾಮದ ಲೋಹಿತ್ ಎಂಬಾತ, ಕ್ಯಾಷ್ ಕೌಂಟರ್‍ನಲ್ಲಿದ್ದ ರೂ. 9,500 ಹಣವನ್ನು ಕಳ್ಳತನ ಮಾಡಿದ್ದ. ಹೋಂ ಸ್ಟೇಗೆ ಲೋಹಿತ್ ಭೇಟಿ ನೀಡಿದ್ದ ದೃಶ್ಯಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಈ ಬಗ್ಗೆ ಮೊಕದ್ದಮೆ ದಾಖಲಿಸಿ ಕೊಂಡ ಪೊಲೀಸರು ಆರೋಪಿ ಲೋಹಿತ್‍ನನ್ನು ವಶಕ್ಕೆ ಪಡೆದು ವಿಚಾರಿಸಿದ ಸಂದರ್ಭ, ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿದ್ದಾನೆ. ರೂ. 9,500ರಲ್ಲಿ 1,300 ರೂ.ಗಳನ್ನು ಖರ್ಚು ಮಾಡಿದ್ದು, ಉಳಿದ ಹಣವನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ ಕಳೆದ ಫೆ. 25ರಂದು ಜೂನಿಯರ್ ಕಾಲೇಜು ಸಮೀಪದಲ್ಲಿರುವ ಅರುಣ್‍ಕುಮಾರ್ ಎಂಬವರಿಗೆ ಸೇರಿದ ಗೂಡಂಗಡಿಯ ಬಾಗಿಲು ಮುರಿದು ರೂ. 7ಸಾವಿರ ಹಣವನ್ನು ಕಳ್ಳತನ ಮಾಡಿರುವದನ್ನೂ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್ ರಾಜ್, ಸಿಬ್ಬಂದಿಗಳಾದ ಪ್ರವೀಣ್, ನವೀನ್, ಮಧು ಅವರುಗಳು ಭಾಗವಹಿಸಿದ್ದರು.