ಕುಶಾಲನಗರ, ಮೇ 25: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಯುವಪೀಳಿಗೆ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿ ರುವದು ಬೆಳವಣಿಗೆಯಾಗಿದ್ದು ಪೋಷಕರಲ್ಲಿ ಆತಂಕ ಮೂಡಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕುಶಾಲನಗರದ ನೆರೆಯ ಪಿರಿಯಾಪಟ್ಟಣ ತಾಲೂಕಿನ ಭಾಗಗಳಿಂದ ಗಾಂಜಾ ಸರಬರಾಜು ಆಗುತ್ತಿದ್ದು ಕುಶಾಲನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಇದರ ವಿಲೇವಾರಿಯಾಗುತ್ತಿರುವದು ಕಂಡುಬಂದಿದೆ.
ಶಾಲಾ ಕಾಲೇಜುಗಳ ಆವರಣ, ನದಿ ತಟಗಳು, ಹೊಟೇಲ್ಗಳು ಸೇರಿದಂತೆ ಕೆಲವು ಕ್ರೀಂ ಪಾರ್ಲರ್ ಗಳು ಕೂಡ ಇದರ ಅಡ್ಡೆಯಾಗಿವೆ.
ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಕೂಡ ಗಾಂಜಾ ಬಿಕರಿಯಾಗುವದ ರೊಂದಿಗೆ ಕೆಲವು ಯುವಕರು ಈ ದಂಧೆಯಲ್ಲಿ ಸಿಲುಕಿಕೊಂಡಿರುವದು ಇತ್ತೀಚಿನ ಬೆಳವಣಿಗೆ. ಸಿಗರೇಟ್ ಮಾರಾಟ ಮಾಡುವ ನೆಪದಲ್ಲಿ ಈ ದಂಧೆ ತಮ್ಮ ಕಾರ್ಯಾಚರಣೆಯಲ್ಲಿ ಸಫಲವಾಗುತ್ತಿವೆ.
ಕುಶಾಲನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ, ಕಾರು ಚಾಲಿಸುವದರೊಂದಿಗೆ ಅಪಘಾತಕ್ಕೆ ಒಳಗಾಗುತ್ತಿರುವದು ಪರಿಶೀಲನೆ ಸಂದರ್ಭ ತಿಳಿದುಬಂದಿದೆ. ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುವ ಮೂಲಕ ಕೆಲವು ಯುವಕರು ರಸ್ತೆಯಲ್ಲೇ ಪ್ರಾಣ ಕಳೆದುಕೊಂಡಿರುವದು ಒಂದೆಡೆಯಾದರೆ ಇತ್ತೀಚಿನ ಕೆಲವು ಅಪಘಾತಗಳಿಗೆ ಕೂಡ ಈ ಗಾಂಜಾ ಸೇವನೆಯೆ ಕಾರಣ ಎನ್ನಲಾಗಿದೆ. ತಮ್ಮ ಮನಸೋಯಿಚ್ಚೆ ವಾಹನ ಚಾಲನೆ ಮಾಡುವ ಮೂಲಕ ಅಪಘಾತಕ್ಕೆ ಆಹ್ವಾನ ನೀಡುತ್ತಾರೆ.
ಕುಶಾಲನಗರ ಪಟ್ಟಣದಲ್ಲಿ ಕಾಲೇಜಿಗೆಂದು ಬರುವ ಯುವಕರು ಈ ಮಾರಕ ಗಾಂಜಾ ಸೇವನೆಗೆ ಮಾರುಹೋಗಿದ್ದು ಬೆಳಗಿನಿಂದ ಸಂಜೆ ತನಕ ನದಿ ತಟಗಳಲ್ಲಿ ದಿನಕಳೆಯುತ್ತಿರುವದು ಕಂಡುಬಂದಿದೆ. ಕೆಲವು ಇಸ್ಪೀಟ್ ಅಡ್ಡೆಗಳಲ್ಲಿ ಕೂಡ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಆರೋಪಗಳು ಕೇಳಿಬಂದಿವೆ.
ಕುಶಾಲನಗರ ಪಟ್ಟಣದಲ್ಲಿ ಸೇರಿದಂತೆ ನೆರೆಯ ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಕೂಡ ಕೆಲವು ದುಷ್ಕರ್ಮಿಗಳು ಗಾಂಜಾ ಗಿಡಗಳನ್ನು ಬೆಳೆಯುತ್ತಿರುವದು ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದ್ದು ಇದೀಗ ಕಾನೂನು ಸೆರೆಗೆ ಸಿಲುಕಿದ್ದಾರೆ. ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ಕೂಡ ಮಾರಾಟ ದಂಧೆ ತಮ್ಮ ಕೈಚಾಚಿದೆ ಎನ್ನುವ ವದಂತಿಗಳು ಕೂಡ ಹೊರಬಿದ್ದಿದೆ.
ಕೆಲವೆಡೆ ಕಾಫಿ ತೋಟ, ಮನೆಯ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ ನಂತರ ಅವುಗಳ ಮಾರಾಟ ದಂಧೆಯಲ್ಲಿ ತೊಡಗಿರುವ ದುಷ್ಕರ್ಮಿಗಳು ಪೊಲೀಸರಿಗೆ ಸೆರೆಯಾದರೂ ಅವರು ಕಾನೂನಿನಿಂದ ತಪ್ಪಿಸಿ ಹೊರಬರಲು ಯಶಸ್ವಿಯಾಗುತ್ತಿರುವದೇ ಈ ಎಲ್ಲಾ ಆವಾಂತರಗಳಿಗೆ ಕಾರಣ ಎನ್ನಬಹುದು.
ಸ್ಥಳೀಯ ಇಂದಿರಾ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಇದನ್ನೇ ದಂಧೆಯಾಗಿ ಬಳಸಿಕೊಂಡು ಆಗಾಗ್ಯೆ ಪೊಲೀಸ್ ಅತಿಥಿಯಾಗುತ್ತಿ ರುವದು ಸಾಮಾನ್ಯ ಸಂಗತಿಯಾಗಿದೆ. ಈ ದಂಧೆ ಮೂಲಕ ಬಹುತೇಕ ಯುವ ಪೀಳಿಗೆ ಗಾಂಜಾಕ್ಕೆ ಬಲಿಯಾಗುತ್ತಿದ್ದು ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತನೆಗೊಳ್ಳಲು ಕಾರಣವಾಗುತ್ತಿದೆ.
ಗಾಂಜಾ ಬೆಳೆಯುವ ಮಾಹಿತಿ ಅಥವಾ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ದೊರೆತಲ್ಲಿ ತಕ್ಷಣ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರ ಮೊಬೈಲ್ ಸಂಖ್ಯೆ 9480804932 ಅಥವಾ 9480801921ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಡಿವೈಎಸ್ಪಿ ದಿನಕರ ಶೆಟ್ಟಿ ಪತ್ರಿಕೆ ಮೂಲಕ ಕೋರಿದ್ದಾರೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುವದಾಗಿ ಕೂಡ ಅವರು ತಿಳಿಸಿದ್ದಾರೆ.
- ಚಂದ್ರಮೋಹನ್