ಚೆಟ್ಟಳ್ಳಿ, ಮೇ 26: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಲ್ಲಿ ಜಯಭೇರಿ ಬಾರಿಸಿದ ಪ್ರಯುಕ್ತ ಚೆಟ್ಟಳ್ಳಿಯಲ್ಲಿ ವಿಜಯೋತ್ಸವ ನಡೆಸಲಾಯಿತು.
ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಈ ಗೆಲವು ಭಾರತೀಯರ ಗೆಲವಾಗಿದ್ದು ವಿರೋದ ಪಕ್ಷವೇ ಇಲ್ಲದಂತಾಗಿದೆ. ಬಿಜೆಪಿ ಹಾಗೂ ದೇಶದ ಪ್ರಧಾನಿಯನ್ನು ನಿಂದಿಸಿದವರು ಎಲ್ಲಿ ಹೋದರೆಂದರು. ಚೆಟ್ಟಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ ಮಾತನಾಡಿ ಬಿಜೆಪಿ ಅತಿ ಹೆಚ್ಚು ಮತದಿಂದ ವಿಜಯಿ ಆಗುವ ಮೂಲಕ ಮುಂದಿನ ದಿನಗಳಲ್ಲಿ ಮೋದಿಯವರು ಪ್ರಧಾನಿಯಾಗಲಿದ್ದಾರೆಂದರು. ಗ್ರಾಮ ಪಂಚಾಯಿತಿ ಸದಸ್ಯೆ ಮೇರಿ ಅಂಬುದಾಸ್, ಮಾಜಿ ಅಧ್ಯಕ್ಷ ಮುಳ್ಳಂಡ ಕಾಶಿ ದೇವಯ್ಯ, ಬೊಪ್ಪಟ್ಟಿರ ನಾಣಯ್ಯ ಬಿಜೆಪಿ ಗೆಲವಿನ ಬಗ್ಗೆ ಮಾತನಾಡಿದರು. ಬಿಜೆಪಿ ಕಾರ್ಯಕರ್ತರು, ಸ್ಥಾಯಿಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು. ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ಮೂರ್ನಾಡು: ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಭೂತ ಪೂರ್ವ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಟೀಂ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಮೋದಿಗೆ ಜೈಕಾರ ಹಾಕಿ ಸಂತೋಷ ಪಟ್ಟರು. ಬಳಿಕ ಕಾರ್ಯಕರ್ತರು ಪಟಾಕಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು.