ಸೋಮವಾರಪೇಟೆ,ಮೇ.25: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಒಟ್ಟು 78 ಲಕ್ಷ ತೆರಿಗೆ ಸಂಗ್ರಹಕ್ಕೆ ಬಾಕಿಯಿದ್ದು, ಪಟ್ಟಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಿನ್ನಡೆಯಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ರೂ. 25ಲಕ್ಷ, ನೀರಿನ ಶುಲ್ಕ ರೂ. 22 ಸಾವಿರ, ಮಳಿಗೆ ಬಾಡಿಗೆ ಶುಲ್ಕ ರೂ. 25 ಲಕ್ಷ ಸೇರಿದಂತೆ ಪಂಚಾಯಿತಿಗೆ ಸೇರಿದ ನೆಲ ಬಾಡಿಗೆ ಶುಲ್ಕ ರೂ. 6 ಲಕ್ಷ ಸಂಗ್ರಹಕ್ಕೆ ಬಾಕಿ ಉಳಿದಿದೆ. ಭಾರೀ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಬಾಕಿ ಇರುವದರಿಂದ ಪಟ್ಟಣದ ಅಭಿವೃದ್ಧಿ, ದಿನನಿತ್ಯದ ವ್ಯವಹಾರ, ಆಡಳಿತ ಸೇವೆ, ಸ್ವಚ್ಚತೆ, ಕುಡಿಯುವ ನೀರು, ವಿದ್ಯುತ್ ದೀಪ, ದಿನಗೂಲಿ ನೌಕರರ ವೇತನ, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಡಚಣೆಯಾಗುತ್ತಿದೆ.

ಪಂಚಾಯಿತಿಗೆ ವಿವಿಧ ಮೂಲಗಳಿಂದ ರೂ. 78 ಲಕ್ಷಕ್ಕೂ ಅಧಿಕ ಹಣ ತೆರಿಗೆ ರೂಪದಲ್ಲಿ ಬರಬೇಕಿದ್ದು, ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ. ಪ.ಪಂ. ವ್ಯಾಪ್ತಿಯಲ್ಲಿ ತೆರಿಗೆ ಉಳಿಸಿಕೊಂಡಿರುವವರು ಕೂಡಲೇ ಪಾವತಿಸಲು ಮುಂದಾಗಬೇಕು. ತಪ್ಪಿದಲ್ಲಿ ಬಾಕಿ ಉಳಿಸಿಕೊಂಡ ತೆರಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವದು ಇದರೊಂದಿಗೆ ಅತೀ ಹೆಚ್ಚು ಬಾಕಿ ಉಳಿಸಿಕೊಂಡಿರು ವವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಬಗ್ಗೆಯೂ ಕ್ರಮ ವಹಿಸಲಾಗುವದು ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸಿ. ನಟರಾಜ್ ತಿಳಿಸಿದ್ದಾರೆ.