ಮಡಿಕೇರಿ, ಮೇ 25: ತಲಕಾವೇರಿ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜನೆ ಮಾಡುವಂತೆ ಪ್ರಮುಖರಾದ ಪಿ.ಎಂ. ರಾಜಿವ್, ಕೆ.ಜೆ. ಭರತ್, ದಂಡಿನ ಜಯಂತ್, ಅಮೆ ಪದ್ಮಯ್ಯ, ಮೂಲೆಮಜಲು ಪೂಣಚ್ಚ ಸೇರಿದಂತೆ 30 ಮಂದಿ ಸ್ಥಳೀಯರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಮಳೆ ಕಡಿಮೆ ಯಾಗಿದ್ದು, ಜಲಮೂಲಗಳು ಬತ್ತಿ ಹೋಗಿರುವದರಿಂದ ತಲಕಾವೇರಿಯ ಕುಂಡಿಕೆಯ ಬಳಿ ಕೇರಳದ ಕಣ್ಣಾನೂರಿನ ಅಗಸ್ತ್ಯೇಶ್ವರ ಮಠದ ಸ್ವಾಮೀಜಿಯೆಂಬ ವ್ಯಕ್ತಿಯೊಬ್ಬರಿಂದ ತಲಕಾವೇರಿ ಕುಂಡಿಕೆಯ ಬಳಿ ಜಲಮೂಲ ತಡೆಯಾಗಿರುವದಾಗಿ ಅದನ್ನು ಯಾಂತ್ರಿಕವಾಗಿ ಸರಿಪಡಿಸಲು ತಾ. 24 ಮತ್ತು 25 ರಂದು ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲು ಸಮಿತಿಯ ಅಧ್ಯಕ್ಷರು ತಮ್ಮ ಸಮಿತಿಯ ಗಮನಕ್ಕೆ ತಾರದೆ ಮತ್ತು ಸ್ಥಳೀಯರ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ ತೀರ್ಮಾನಿಸಿ ರುವದನ್ನು ನಾವು ಸ್ಥಳೀಯರು ವಿರೋಧಿಸುತ್ತೇವೆ ಮತ್ತು ಈ ಹಿಂದೆ ತಲಕಾವೇರಿಯ ಅಗಸ್ತ್ಯ ಲಿಂಗವನ್ನು ಸಮುದ್ರ ವಿಸರ್ಜನೆ ಮಾಡುವದಾಗಿ ಸ್ಥಳೀಯರು ವಿರೋಧವಿದ್ದರೂ ಏಕಪಕ್ಷೀಯವಾಗಿ ನಿರ್ಣಯಿಸಿದ್ದು ಮತ್ತು ಇದರ ವಿರುದ್ಧ ನ್ಯಾಯಾಲಯ ದಿಂದ ತಡೆಯಾಗಿರು ವದು ರಾಜ್ಯಾದ್ಯಂತ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ದೇವರ ವರದಂತಾಗಿದೆ. ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳು ಸಪ್ತ ನದಿಗಳಲ್ಲಿ ಒಂದಾದ ಋಷಿಗಳಲ್ಲಿ ಒಂದಾದ ಅಗಸ್ತ್ಯ ಕ್ಷೇತ್ರ - ಇಂದು ಹಿಂದು ಪುರಾಣದ ತಳಹದಿಯಾಗಿರುತ್ತದೆ. ಇಲ್ಲಿ ಪುರಾಣ ಲಿಂಗ ಬದಲಾವಣೆ, ಆಚರಣೆಗಳ ಬದಲಾವಣೆಯನ್ನು ಭಕ್ತಾದಿಗಳಾದ ನಾವು ವಿರೋಧಿಸು ತ್ತೇವೆ. ಆಡಳಿತ ಪಕ್ಷದ ಸರಕಾರ ದೇವಸ್ಥಾನ ಸಮಿತಿಯನ್ನು ಆಯ್ಕೆ ಮಾಡುವದು ಸರಕಾರದ ನಿಯಮ ವಾಗಿರುತ್ತದೆ. ಆದರೆ ದೇವಸ್ಥಾನದ ಸಂಪ್ರದಾಯವನ್ನು ಕಡೆಗಣಿಸಿ ಅಗಸ್ತ್ಯ ಲಿಂಗವನ್ನು ಸಮುದ್ರ ವಿಸರ್ಜನೆ ಮಾಡಲು ಹೊರಟಿರುವದು ಮತ್ತು ತಲಕಾವೇರಿಯಲ್ಲಿ 2 ದಿನಗಳ ಕಾಲ ಪೂಜೆ ತಡೆ ಹಿಡಿಯುವಂತೆ ಮಾಡಿರುವದು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ತೊಂದರೆ ಉಂಟು ಮಾಡಿದಂತಾಗಿದೆ.

ಜಿಲ್ಲಾಡಳಿತ ಮತ್ತು ಮುಜಿರಾಯಿ ಇಲಾಖೆ ಈ ಬಗ್ಗೆ ಕೂಲಂಕಶ ವಿಚಾರ ವಿಮರ್ಶೆ ಮಾಡಿ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿರುವ ಈ ಸಮಿತಿಯನ್ನು ವಿಸರ್ಜನೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.