ಮಡಿಕೇರಿ, ಮೇ 25: ಬಾದಾಮಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಪ್ರವೇಶಗಳು ಪ್ರಾರಂಭವಾಗಿವೆ.
ಪಿಯುಸಿ, ಐಟಿಐ, ಜೆಓಡಿಸಿ ಹಾಗೂ ತತ್ಸಮಾನ (10+2) ಪರೀಕ್ಷೆಗಳಲ್ಲಿ ಪಾಸಾದ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ದೃಶ್ಯ ಕಲೆಯ ಈ ಪದವಿಗಳನ್ನು ಸ್ವ ಉದ್ಯೋಗ ಪ್ರಧಾನವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಪದವೀಧರರು ಸ್ವಂತ ಸ್ಟುಡಿಯೋ ಆರಂಭಿಸಿ ಮೂರ್ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಚಿತ್ರಕಲಾ ಪದವೀಧರರು ಚಲನಚಿತ್ರ, ಧಾರವಾಹಿ, ದೂರದರ್ಶನಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಎನಿಮೇಶನ್, ಪೋಸ್ಟರ್ ಡಿಸೈನ್ ಸ್ಕೆಚಿಂಗ್‍ನಲ್ಲಿ ಪಳಗಿದವರು ಬೇರೆ ಬೇರೆ ವಾಣಿಜ್ಯ ಕಂಪೆನಿಗಳು, ಜಾಹೀರಾತು ಸಂಸ್ಥೆಗಳು ಟೆಕ್ಸ್‍ಟೈಲ್ ಡಿಸೈನ್, ಪತ್ರಿಕೋದ್ಯಮ, ಫ್ಯಾಶನ್ ಡಿಸೈನ್ ಮುಂತಾದ ಅನೇಕ ಕಡೆಗಳಲ್ಲಿ ಕೆಲಸ ಮಾಡಬಹುದು.
ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾಶಿಬಿರ, ಕಾರ್ಯಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಕೇಂದ್ರವು ನಾಡೋಜ ಡಾ. ಆರ್.ಎಂ. ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು ಹೊಂದಿದೆ. ಇಲ್ಲಿ ನಮ್ಮ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನಕ್ಕೆ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಾದಾಮಿ ಕೇಂದ್ರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ.