ಕೂಡಿಗೆ, ಮೇ 25: ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ವೀರಭೂಮಿಯ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ಚರಂಡಿ ನಿರ್ಮಾಣ ಮಾಡದೇ ಪೈಪ್‍ಲೈನ್ ಅಳವಡಿಸಲು ಬಿಡುವದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಕೂಡಮಂಗಳೂರು ಗ್ರಾ.ಪಂ. ವತಿಯಿಂದ ಬಸವೇಶ್ವರ ಬಡಾವಣೆಯ ತಾತ್ಕಾಲಿಕವಾಗಿ ಚರಂಡಿ ನಿರ್ಮಾಣ ಮಾಡಲು ಕಾರ್ಯ ಪ್ರಾರಂಭಿಸಿದ್ದರು. ತಾತ್ಕಾಲಿಕವಾಗಿ ಮಣ್ಣಿನ ಚರಂಡಿಯನ್ನು ನಿರ್ಮಿಸುವಾಗ ನೀರಿನ ಪೈಪ್ ಲೈನನ್ನು ಬಿಚ್ಚಿಡಲಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ ಹಿನೆÀ್ನಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸ್ಥಳೀಯ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ. ಕಾಮಗಾರಿ ಸ್ಥಗಿತಗೊಂಡು ನಾಲ್ಕು ದಿನಗಳು ಕಳೆದಿದ್ದು, ಸ್ಥಳೀಯರು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ನಡೆಸಲು ಸ್ಥಳೀಯರ ವಿರೋಧವಿರುವ ಕಾರಣ ಪಂಚಾಯಿತಿಯು ಪೈಪ್‍ಲೈನ್ ಅಳವಡಿಕೆಗೆÉ ಮುಂದಾಗಿದ್ದು, ಚರಂಡಿ ನಿರ್ಮಾಣದ ನಂತರ ಪೈಪ್‍ಲೈನ್ ಅಳವಡಿಸಿ ಎಂದು ಇಲ್ಲಿನ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.

ಪಂಚಾಯಿತಿ ವತಿಯಿಂದ ಬಸವೇಶ್ವರ ಬಡಾವಣೆಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲು ಮುಂದಾಗಿದ್ದು, ಇದಕ್ಕೂ ಕೂಡಾ ಸ್ಥಳೀಯರು ನಿರಾಕರಿಸಿದ್ದಾರೆ.

ಬಸವೇಶ್ವರ ಬಡಾವಣೆಯ ಜನರು ಶಾಸಕ ಅಪ್ಪಚ್ಚುರಂಜನ್ ಅವರ ಮನೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸುವದರ ಜೊತೆಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು, ಸೋಮವಾರದಂದು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವದಾಗಿ ಭರವಸೆ ನೀಡಿದ್ದಾರೆ ಎಂದು ಬಸವೇಶ್ವರ ಬಡಾವಣೆ ನಿವಾಸಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಯಿಷಾ, ಬಸವೇಶ್ವರ ಬಡಾವಣೆಯಲ್ಲಿ ಪೈಪ್ ಲೈನ್ ಬಿಚ್ಚಿಟ್ಟಿರುವ ಹಿನೆÀ್ನಲೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದ್ದು, ಸ್ಥಳೀಯರು ಇದಕ್ಕೆ ನಿರಾಕರಿಸಿದ್ದಾರೆ ಎಂದರು.

ರಸ್ತೆ ಅಗಲೀಕರಣದ ವೇಳೆ ರಸ್ತೆಯಲ್ಲಿದ್ದ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿ ಬೀಳುವ ಹಂತದಲ್ಲಿದ್ದು, ಮಳೆ ನೀರು ನೇರವಾಗಿ ಮನೆ ಬಾಗಿಲಿಗೆ ತಲಪುತ್ತಿದೆ. ಆದಷ್ಟು ಬೇಗನೇ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಈ ಭಾಗ 50 ಕುಟುಂಬದ ಗ್ರಾಮಸ್ಥರು ಆಗ್ರಹಿಸಿದ್ದಾರೆ.