ಮಡಿಕೇರಿ, ಮೇ 26: ಮಡಿಕೇರಿ ನಗರಸಭೆಗೆ ರಾಜ್ಯ ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿರುವ, ಈ ಹಿಂದಿನ ಅನುದಾನ ರೂ. 35 ಕೋಟಿಯನ್ನು ಸಮರ್ಪಕ ಬಳಕೆಯೊಂದಿಗೆ, ಅಪಾಯ ಎದುರಾಗುವ ಮುನ್ನ ಎದ್ದೇಳಬೇಕಿದೆ. ತಪ್ಪಿದಲ್ಲಿ ಮಳೆಗಾಲ ಅಡಿಯಿರಿಸಿದರೆ, ಸ್ಥಳೀಯರೊಂದಿಗೆ, ಜಿಲ್ಲಾ ಕೇಂದ್ರದತ್ತ ಆಗಮಿಸುವ ಪ್ರವಾಸಿಗರು ತೊಂದರೆಗೆ ಸಿಲುಕುವ ಅಪಾಯವಿದೆ.
ಮಡಿಕೇರಿಯ ಹಿಂದಿನ ಖಾಸಗಿ ಬಸ್ ನಿಲ್ದಾಣದ ಬೆಟ್ಟಸಾಲು ಕುಸಿದಿರುವ ಪ್ರದೇಶ, ರಾಜಾಸೀಟ್‍ನಿಂದ ನೂತನ ಬಸ್ ನಿಲ್ದಾಣವರೆಗಿನ ಹಲವಷ್ಟು ತೊಂದರೆಗಳು, ಒಳಚರಂಡಿ ವ್ಯವಸ್ಥೆಯಿಂದ ಎದುರಾಗಿರುವ ನರಕ ಸದೃಶ ಮಾರ್ಗಗಳು ಇತ್ಯಾದಿ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳು ಗಮನ ಹರಿಸಬೇಕಿದೆ.
ಹಳೆಯ ಬಸ್ ನಿಲ್ದಾಣದ ಕಟ್ಟಡವನ್ನು ತರಾತುರಿಯಲ್ಲಿ ತೆರವುಗೊಳಿಸಲು ಆಸಕ್ತಿ ತೋರಿದವರು, ‘ಮಡಿಕೇರಿ ಸ್ಕ್ವೇರ್’ ನಂತಹ ಯೋಜನೆ ಅನುಷ್ಠಾನ ಸಂಬಂಧ ಕಾಳಜಿ ತೋರದೆ ನಿತ್ಯ ಇಲ್ಲಿ ಸಂಚರಿಸುವ ದಾರಿಹೋಕರು, ವಾಹನ ಚಾಲಕರು, ಪ್ರವಾಸಿಗಳು ಆತಂಕದ ಹೆಜ್ಜೆ ಇಡುವಂತಾಗಿದೆ. ಇನ್ನೊಂದೆಡೆ ಮಹದೇವಪೇಟೆ ರಸ್ತೆಯ ಇಕ್ಕಡೆಗಳಲ್ಲಿ ಪಾದಚಾರಿ ಮಾರ್ಗದ ‘ಇಂಟರ್‍ಲಾಕ್’ ಅಳವಡಿಕೆ, ಚರಂಡಿ ದುರಸ್ತಿ ಕೆಲಸಗಳು ಮುಂದುವರಿಯುವ ಲಕ್ಷಣ ಗೋಚರಿಸದಂತಾಗಿದೆ.
ರಾಜಾಸೀಟ್ ಮುಖಾಂತರ ಹೊಸ ಬಡಾವಣೆಯಲ್ಲಿ ಜನತೆಯ ವಿರೋಧದ ನಡುವೆ ಜೆಸಿಬಿ ಯಂತ್ರದಿಂದ ಇದ್ದಂತಹ ತಡೆಗೋಡೆ ಕೆಡವಿ ರಸ್ತೆ ಅಗಲೀಕರಣ ಮಾಡಲಾಗಿದೆ. ಇಂತಹ ಪ್ರದೇಶದಲ್ಲಿ ಮಳೆಯಾದರೆ ಮತ್ತೆ ಕುಸಿದು ರಸ್ತೆ ತಡೆ ಉಂಟಾಗುವ ಲಕ್ಷಣವಿದ್ದು, ತಡೆಗೋಡೆ ಮತ್ತು ನೀರು ಹಿರಿಯುವಿಕೆಗೆ ಚರಂಡಿ ಇಲ್ಲವಾಗಿದೆ. ಹೀಗಾಗಿ ಡಾಮರೀಕರಣಗೊಂಡಿರುವ ರಸ್ತೆ ಮತ್ತೆ ಕೊಚ್ಚಿಹೋಗುವ ಸಂಭವವಿದೆ.
ಇಲ್ಲಿನ ಕಾಲೇಜು ರಸ್ತೆ ತಿರುವಿನಿಂದ ರಾಣಿಪೇಟೆ ಮೂಲಕ ಮುತ್ತಪ್ಪ ದೇವಾಲಯದತ್ತ ಸಾಗುವ ರಸ್ತೆಗೆ ರೂ. 1 ಕೋಟಿ ಪ್ರಸ್ತಾಪಿಸಿದ್ದರೂ ಕೆಲಸ ಕೈಗೊಳ್ಳದೆ ಹೆಜ್ಜೆ ಹೆಜ್ಜೆಗೂ ಅಪಾಯದೊಂದಿಗೆ ಹೊಂಡ - ಗುಂಡಿಗಳನ್ನು ಕಾಣಬಹುದಾಗಿದೆ.
ಬಹುಶಃ ಈಗಿನ ಪರಿಸ್ಥಿತಿಯಲ್ಲಿ ನಗರಸಭೆಗೆ ಚುನಾವಣೆಯೂ ನಡೆಯದೆ, ಮಳೆಗಾಲದಲ್ಲಿ ಕೇವಲ ಓರ್ವ ಆಯುಕ್ತ ಮತ್ತು ಬೆರಳೆಣಿಕೆ ಸಿಬ್ಬಂದಿ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಿಯಾರು? ಎಂಬ ಆತಂಕ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನಗರದ ಜನತೆಯನ್ನು ಕಾಡತೊಡಗಿದೆ.
-ಶ್ರೀಸುತ