ಕೂಡಿಗೆ, ಮೇ 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪಲು, ಹೆಗ್ಡಳ್ಳಿ, ಕೋಟೆ ವ್ಯಾಪ್ತಿಯ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮತ್ತತ್‍ರಾಯ ಮತ್ತು ಗ್ರಾಮಗಳ ಸೇವಾ ಸಮಿತಿಗಳಿಂದ ಗ್ರಾಮ ದೇವತೆ ದಂಡಿನಮ್ಮ ತಾಯಿಯ 27ನೇ ವಾರ್ಷಿಕ ಹಬ್ಬವು ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜೋತ್ಸವದ ಅಂಗವಾಗಿ ಗಣಪತಿ ಹೋಮ, ನವಗ್ರಹ ಶಾಂತಿ, ದುರ್ಗಿ ಶಾಂತಿ ಹೋಮ ನಡೆದವು. ಗ್ರಾಮಸ್ಥರು ಉಪವಾಸ ವ್ರತ ಆಚರಿಸಿದವರು ಕಾವೇರಿ ನದಿಗೆ ತೆರಳಿ ಬಾಳೆಹಣ್ಣಿನ ಕುಕ್ಕೆ ಹಾಗೂ ಮಹಿಳೆಯರು ದೂಪದ ಆರತಿಯನ್ನು ಹಿಡಿದು ಕಾವೇರಿಗೆ ಪೂಜೆ ಸಲ್ಲಿಸಿದರು.

ನಂತರ ಮಾರ್ಗದಲ್ಲೆ ಇರುವ ಮತ್ತತ್‍ರಾಯರಿಗೆ ಮೊದಲು ಪೂಜೆ ಸಲ್ಲಿಸಿ, ಮೆರವಣಿಗೆ ಸಾಗಿದರು. ಆನಂತರ ಕೋಟೆ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯದ ಆವರಣಕ್ಕೆ ಬಂದು ಬೆಂಕಿ ಕೊಂಡವನ್ನು ಹಾಯುವದರ ಮೂಲಕ ಸಾಂಪ್ರದಾಯಿಕವಾಗಿ ಕೊಂಡೋತ್ಸವದಲ್ಲಿ ತಮ್ಮ ಭಕ್ತಿ ಸಮರ್ಪಿಸಿದರು.

ಮರು ದಿನ ಜಾತ್ರೋತ್ಸವದ ಅಂಗವಾಗಿ ಬೆಳಗ್ಗಿನಿಂದ ಪೂಜೆಗಳು ನಡೆದವು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಕೈಂಕರ್ಯ ಗಳನ್ನು ದೇವಾಲಯದ ಅರ್ಚಕ ಚಂದ್ರಮೌಳಿ ಹಾಗೂ ಕಣಿವೆ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರಾಚಾರ್ ನೆರವೇರಿಸಿದರು. ಪೂಜೋತ್ಸವದ ಅಂಗವಾಗಿ ಗ್ರಾಮಗಳು ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಉಪಾಧ್ಯಕ್ಷ ಕೆ.ಪಿ. ಗಿರೀಶ್‍ಗೌಡ, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಉಪಕಾರ್ಯದರ್ಶಿ ಬಿ.ಎಸ್. ರಾಜು, ಗೌರವ ಅಧ್ಯಕ್ಷ ಕೆ.ಟಿ. ಕೃಷ್ಣ, ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಗ್ರಾಮದ ಹಿರಿಯ ಮುಖಂಡರು, ಸುತ್ತಮುತ್ತಲ ಗ್ರಾಮಸ್ಥರು ಇದ್ದರು.