ಸೋಮವಾರಪೇಟೆ,ಮೇ.26: ತಾಲೂಕಿನ ಅರಶಿಣಗುಪ್ಪೆ-ಸಿದ್ಧಲಿಂಗಪುರ ಗ್ರಾಮದಲ್ಲಿರುವ ಶ್ರೀಮಂಜುನಾಥ ದೇವಾಲಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.

ದೇವಾಲಯದಲ್ಲಿ ಆಯೋಜಿಸಲಾಗಿದ್ದ ಪಂಚಮಿ ಪೂಜೋತ್ಸವದ ನಂತರ ಸಿದ್ಧಲಿಂಗಪುರ, ಅರಶಿಣಗುಪ್ಪೆ, ಬಾಣಾವಾರ, ಆಲೂರು ಸಿದ್ದಾಪುರ ಸುತ್ತಮುತ್ತಲಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ರೂ.40ಸಾವಿರ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭ ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್ ಅವರು ಮಾತನಾಡಿ, ಕಳೆದ ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ದೇವಾಲಯಕ್ಕೆ ಆಗಮಿಸುವ ಭಕ್ತರ ನೆರವಿನಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ದಾನಿಗಳು ಮತ್ತು ರುದ್ರಭೈರವಿ ಟ್ರಸ್ಟ್‍ನ ಸದಸ್ಯರಾದ ಪ್ರದೀಪ್, ದಾನಿಗಳಾದ ಮುಳ್ಳುಸೋಗೆ ಗ್ರಾಪಂ ಉಪಾಧ್ಯಕ್ಷ ತಾರಾನಾಥ್, ಪ್ರೇಮ್‍ನಾಥ್, ಮಧು, ಶಿವಶಂಕರ್, ಅಜಿತ್, ರಾಮನಾಥನ್, ವಕೀಲರಾದ ಸುರೇಶ್, ದೊರೆಸ್ವಾಮಿ, ರವಿಪ್ರಕಾಶ್, ಅರಿಶಿಣಗುಪ್ಪೆಯ ಗಣಪತಿ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.