ವೀರಾಜಪೇಟೆ, ಮೆ. 25: ಎರಡು ವರ್ಷಕೊಮ್ಮೆ ನಡೆಯುವ ಶ್ರೀ ಭದ್ರಕಾಳಿಯ ಉತ್ಸವ ಮತ್ತು ಬೋಡು ನಮ್ಮೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತ್ತು.
ಶ್ರೀ ಭದ್ರಕಾಳಿ ದೇವಿಯ ಉತ್ಸವ ತಾ. 16 ರಿಂದ ಆರಂಭವಾಗಿ, ತಾ. 22 ರಂದು ಬನದಿಂದ ದೇವಿಯ ಉತ್ಸವ ಮೂರ್ತಿಯು ದೇಗುಲಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿ, ತಾ. 23 ರಂದು ಸಂಜೆ ಗ್ರಾಮಸ್ಥರು ಹರಕೆಯ ರೂಪದಲ್ಲಿ ವಿವಿಧ ವೇಷಧರಿಸಿ ಮನೆಮನೆಗೆ ತೆರಳಿ ಕಾಣಿಕೆ ಸಂಗ್ರಹಿಸಿ ದೇವಿಗೆ ಹರಿಕೆ ಒಪ್ಪಿಸುವ ಪದ್ಧತಿಯಿದ್ದು, ತಾ. 24 ರಂದು ಕೊಪ್ಪಿರ ಮನೆಯಿಂದ ಶ್ರೀ ಭದ್ರಕಾಳಿಯ ತೆರೆ ಹೊರ ನಡೆಯಿತು. ತೆರೆಯೊಂದಿಗೆ ಕಬ್ಬಚ್ಚೀರ ಮತ್ತು ಚಂದಪಂಡ ಮನೆಯಿಂದ ಹರಿಕೆಯ ಕುದುರೆಗಳು ವಾದ್ಯದೊಂದಿಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಸಂಚರಿಸಿ ದೇಗುಲಕ್ಕೆ ಆಗಮಿಸಿದವು, ದೇವಾಲಯದಲ್ಲಿ ಮೂರು ಪ್ರದಕ್ಷಿಣೆಯ ಮೂಲಕ ಭಕ್ತರಿಗೆ ಆಶೀರ್ವಾದ ನೀಡಿದವು. ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ, ಮಹಾಪೂಜೆ ಸಲ್ಲಿಕೆಯಾಯಿತು. ಪ್ರಸಾದ ವಿನಿಯೋಗ ನಡೆಯಿತು. ಸಾಂಪ್ರದಾಯಿಕ ‘ಕುಂದು ಚೂಳೆ ಕಳಿ’ ನಡೆದು ಸಂಜೆಯ ವೇಳೆಗೆ ದೇವಿಗೆ ಸಂಕಲ್ಪ ಪೂಜೆಯೊಂದಿಗೆ ಉತ್ಸವ ತೆರೆ ಕಂಡಿತು.
ಉತ್ಸವದಲ್ಲಿ ಗ್ರಾಮದ ದೇವತಕ್ಕ ಕರ್ತಚ್ಚೀರ ರಾಯ್ ಅಯ್ಯಪ್ಪ, ಹಿರಿಯರಾದ ಚಂದಪಂಡ ನಂಜಪ್ಪ, ಕಬ್ಬಚ್ಚೀರ ಕಾವೇರಿಯಪ್ಪ, ಕೀತಿಯಂಡ ಸುಬ್ಬಯ್ಯ ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ದೇವಿಯ ಅನುಗ್ರಹ ಪಡೆದು ಪುನೀತರಾದರು.