ಕೂಡಿಗೆ, ಮೇ 26: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಈ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ಬೇಸಾಯ ಮಾಡಲು ಉಳುಮೆ ಮಾಡಿ ಬಿತ್ತನೆ ಬೀಜಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ, ಚಿಕ್ಕತ್ತೂರು, ದೊಡ್ಡತ್ತೂರು, ಸೀಗೆಹೊಸೂರು ಭಾಗಗಳಲ್ಲಿ ನೂರಾರು ರೈತರು ಬೇಸಾಯದತ್ತ ಮುಖ ಮಾಡಿರುತ್ತಾರೆ. ಅರೆಮಲೆನಾಡು ಪ್ರದೇಶವಾಗಿರುವ ಈ ಗ್ರಾಮಗಳಲ್ಲಿ ಜೂನ್ ಮೊದಲ ವಾರದಲ್ಲೆ ಜೋಳ ಬಿತ್ತನೆಗೆ ಸಿದ್ಧರಾಗಿರುತ್ತಾರೆ. ಸಾವಿರಾರು ಎಕರೆ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಜೋಳವನ್ನು ಬೆಳೆಯುತ್ತಾರೆ. ರೈತರು ಇದೀಗ ಜೋಳ ಬಿತ್ತನೆ ಮಾಡಲು ಕೃಷಿ ಭೂಮಿಯನ್ನು ಹದಗೊಳಿಸಿ, ಈಗಾಗಲೇ ಸಹಕಾರ ಸಂಘಗಳಲ್ಲಿ ಸಾಕಷ್ಟು ದಾಸ್ತಾನಿರುವ ಜೋಳದ ಬಿತ್ತನೆಗಳಾದ ಗಂಗಾ ಕಾವೇರಿ, ಕಾವೇರಿ ಸೀಡ್ಸ್, ಸಿಪಿ, ವಿವಿಧ ಹೈಬ್ರೀಡ್ ತಳಿಗಳನ್ನು ಖರೀದಿಸಿ ಜಮೀನುಗಳಲ್ಲಿ ಬಿತ್ತನೆ ಮಾಡಲು ಸಿದ್ಧರಾಗಿದ್ದಾರೆ.