ಮಡಿಕೇರಿ, ಮೇ 24: ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಕೈಗೊಂಡಿದ್ದ ಸಾಧನೆಯಿಂದ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರವೂ ಸೇರಿದಂತೆ; ಕರ್ನಾಟಕದಲ್ಲಿ 25 ಸ್ಥಾನಗಳೊಂದಿಗೆ, ದೇಶದಲ್ಲಿ 303 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವದು ಸಾಧ್ಯವಾಗಿದೆ ಎಂದು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿಶ್ಲೇಷಿಸಿದ್ದಾರೆ.

ಪ್ರಸಕ್ತ ಬಿಜೆಪಿ ಹಾಗೂ ಎನ್.ಡಿ.ಎ. ಪ್ರಚಂಡ ಗೆಲುವಿನ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ಸಂದರ್ಭ ಕಾಂಗ್ರೆಸ್ ಅನುಕಂಪದ ಅಲೆಯಿಂದ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದನ್ನು ಉಲ್ಲೇಖಿಸಿದರು. ಆದರೆ ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ಸೇತರ ಸರಕಾರವಾಗಿ 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರಕಾರವು ಭ್ರಷ್ಟಾಚಾರ ರಹಿತ ದಕ್ಷ ಆಡಳಿತದೊಂದಿಗೆ ಶೇ.57ರಷ್ಟು ಜನಮತ ಪಡೆದಿರುವದು ಅತ್ಯಂತ ಶ್ಲಾಘನೀಯವೆಂದು ಬಣ್ಣಿಸಿದರು.

ಪರಿಣಾಮ ಇಂದು ದೇಶದಲ್ಲಿ ಬಿಜೆಪಿ ಹಾಗೂ ಪಕ್ಷದ ಜನಪ್ರತಿನಿಧಿಗಳಾದ ತಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದ ಬೋಪಯ್ಯ; ಭವಿಷ್ಯದಲ್ಲಿ ಎಲ್ಲರೂ ಜನತೆಯ ಆಶಯಕ್ಕೆ ಭಂಗವಾಗದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಮೋದಿ ಅಲೆಯೇ ಕಾರಣ : ದೇಶ ಹಾಗೂ ರಾಜ್ಯದೊಂದಿಗೆ ಕೊಡಗು - ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ಮೋದಿ ಅಲೆಯಿಂದಷ್ಟೇ ಗೆಲುವು ಸಾಧಿಸಿದ್ದು; ಇನ್ನಾದರೂ ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಜನತೆಯ ಕಷ್ಟಗಳಿಗೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡಲಿ ಎಂದು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ಹೊರಗೆಡವಿದ ಅವರು, ದೇಶದ ಜನತೆ ಹಾಗೂ ಕೊಡಗಿನವರು ಮೋದಿ ಅವರಿಗೆ ಮತ ನೀಡಿರುವದಾಗಿ ಬೊಟ್ಟು ಮಾಡಿದರು. ಹೀಗಾಗಿ ಸಂಸದ ಪ್ರತಾಪ್ ಸಿಂಹ ತಕ್ಷಣದಿಂದ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ, ಕೇಂದ್ರ ಸರಕಾರ ಹಾಗೂ ಸಂಸತ್ತಿನಲ್ಲಿ ಕೊಡಗಿನ ಬಗ್ಗೆ ಧ್ವನಿಯೆತ್ತಬೇಕೆಂದು ಸಲಹೆ ನೀಡಿದರು.

ಬಿಜೆಪಿ ನಿರೀಕ್ಷಿಸಿತ್ತು: ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಕೊಡಗಿನ ಮತದಾರರು ಸಂಸದ ಪ್ರತಾಪ್ ಸಿಂಹ ಅವರಿಗೆ 65 ಸಾವಿರ ಮತಗಳ ಅಂತರದೊಂದಿಗೆ ಗೆಲುವಿನ ಭರವಸೆ ನೀಡಿದ್ದರು. ಬಿಜೆಪಿಯ ಈ ನಿರೀಕ್ಷೆ 80 ಸಾವಿರ ಮತಗಳ ಗಡಿದಾಟಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಕೊಡಗು - ಮೈಸೂರು ಕ್ಷೇತ್ರದೊಂದಿಗೆ ರಾಜ್ಯದಲ್ಲಿ 22 ಕಡೆ ಗೆಲುವಿನ ನಿರೀಕ್ಷೆ ಬಿಜೆಪಿ ಮೊದಲೇ ಹೊಂದಿದ್ದಾಗಿ ವ್ಯಾಖ್ಯಾನಿಸಿದ ಅವರು, ಈಗ 25 ಕ್ಷೇತ್ರದ ಗೆಲುವಿನೊಂದಿಗೆ ದೇಶದಲ್ಲಿ ಪ್ರಚಂಡ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಸಾಧನೆಗಳು ಶ್ರೀರಕ್ಷೆ ಎಂದರು.

ಬೇಸರ ತಂದಿದೆ - ಜೆಡಿಎಸ್: ಈ ಚುನಾವಣೆಯಲ್ಲಿ ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್‍ಗೆ ಹಿನ್ನಡೆಯಾಗಿ ರುವದು ತೀವ್ರ ಬೇಸರ ತಂದಿದ್ದು, ಒಂದೊಮ್ಮೆ ಇಂದರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಕೂಡ ಸೋಲುವಂತಾಗಿತ್ತು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಪ್ರತಿಕ್ರಿಯಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಇಷ್ಟೊಂದು ಸೋಲಿನ ನಿರೀಕ್ಷೆ ಇರಲಿಲ್ಲವೆಂದು ಬೇಸರಿಸಿದರು. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದ ಅವರು, ಜಿ.ಎಸ್.ಟಿ., ನೋಟು ಅಮಾನ್ಯೀಕರಣದಂತಹ ಸಮಸ್ಯೆಗಳಿಂದ ಈ ನೂತನ ಸರಕಾರ ಜನರಿಗೆ ನೆಮ್ಮದಿ ಕಲ್ಪಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.